HEALTH TIPS

ಇರಾನ್ ಯುದ್ಧದ ವೇಳೆ USS ಅಬ್ರಹಾಂ ಲಿಂಕನ್‌ಗೆ ನಿಯೋಜಿತ 8 ನೌಕಾಪಡೆ ಸಿಬ್ಬಂದಿಯಿಂದ ಆತ್ಮಹತ್ಯೆಗೆ ಯತ್ನ: ದೃಢಪಡಿಸಿದ ಅಮೆರಿಕ ನೌಕಾಪಡೆ

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧ ಕಾರ್ಯಾಚರಣೆಯ ಅವಧಿಯಲ್ಲಿ USS ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯ 8 ನೌಕಾಪಡೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬುದನ್ನು ಅಮೆರಿಕ ನೌಕಾಪಡೆ ದೃಢಪಡಿಸಿದೆ.


USS ಅಬ್ರಹಾಂ ಲಿಂಕನ್ ನೌಕಾ ಸಿಬ್ಬಂದಿಯ ಮನೋಸ್ಥಿತಿ ಮತ್ತು ಮಾನಸಿಕ ಆರೋಗ್ಯದ ಕುರಿತು ಸೆನೆಟರ್ ಕರ್ಸ್ಟನ್ ಗಿಲ್ಲಿಬ್ರಾಂಡ್ ಕೇಳಿದ್ದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ನೀಡಿದ ಉತ್ತರದಲ್ಲಿ ಅಮೆರಿಕದ ನೌಕಾಪಡೆ ಕಾರ್ಯದರ್ಶಿ ಹಂಗ್ ಕಾವೊ ಈ ಮಾಹಿತಿಯನ್ನು ನೀಡಿರುವುದು ಬಹಿರಂಗವಾಗಿದೆ. 

ಇರಾನ್ ವಿರುದ್ಧದ ಅಮೆರಿಕ ಯುದ್ಧದ ಭಾಗವಾಗಿ ಮಧ್ಯಪ್ರಾಚ್ಯದಲ್ಲಿ ನಡೆದ ಸುದೀರ್ಘ ಕಾರ್ಯಾಚರಣೆಯ ವೇಳೆ ನೌಕಾಪಡೆ ಸಿಬ್ಬಂದಿಯ ಮಾನಸಿಕ ಆರೋಗ್ಯ ಹದಗೆಡುತ್ತಿರುವುದು ಹಾಗೂ ಅಲ್ಲಿನ ದುಸ್ಥಿತಿಯ ಕುರಿತು ಅವರ ಕುಟುಂಬದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು.

ಕಳೆದ ನವೆಂಬರ್‌ನಲ್ಲಿ ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿದ್ದ ಈ ನೌಕೆ ಇದೀಗ ಅಮೆರಿಕಕ್ಕೆ ವಾಪಾಸ್ಸಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ಅಮೆರಿಕ ನೌಕಾಪಡೆಯನ್ನು ಸಂಪರ್ಕಿಸಿರುವುದಾಗಿ BBC ವರದಿ ಮಾಡಿದೆ.

ಹಂಗ್ ಕಾವೊ ಅವರು ತಮ್ಮ ಪತ್ರದಲ್ಲಿ, ಸಿಬ್ಬಂದಿಯ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ನೌಕೆಯಲ್ಲಿ ಐವರು ಧರ್ಮಗುರುಗಳು ಹಾಗೂ ಹಲವು ಮಾನಸಿಕ ಆರೋಗ್ಯ ತಜ್ಞರು ಲಭ್ಯವಿದ್ದರು. ಆದರೆ, ಲಿಂಕನ್ ನೌಕೆಯ ಸಿಬ್ಬಂದಿ, ಕೆರಿಯರ್ ಏರ್ವಿಂಗ್ ನಾವಿಕರು, ಸ್ಟ್ರೈಕ್ ಗ್ರೂಪ್ ಮತ್ತು ಡೆಸ್ಟ್ರಾಯರ್ ಸ್ಕ್ವಾಡ್ರನ್ ಸಿಬ್ಬಂದಿ, ಬೆಂಗಾವಲಾಗಿ ತೆರಳಿದ್ದ ಡೆಸ್ಟ್ರಾಯರ್ ನೌಕೆಗಳ ಸಿಬ್ಬಂದಿ ಹಾಗೂ ನೌಕೆಯಲ್ಲಿ ನಿಯೋಜಿಸಲಾಗಿದ್ದ ಎಲ್ಲಾ ವಾಯುಪಡೆ ಸ್ಕ್ವಾಡ್ರನ್‌ಗಳ 8 ನೌಕಾಪಡೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕದ ನೌಕಾಪಡೆಯು, ಅಬ್ರಹಾಂ ಲಿಂಕನ್ ನೌಕೆಯಲ್ಲಿ ಪೂರೈಕೆ ಸಮಸ್ಯೆಗಳಿರುವುದನ್ನು ಒಪ್ಪಿಕೊಂಡಿದ್ದರೂ, ಸುಮಾರು 5,000 ಸಿಬ್ಬಂದಿಯಿದ್ದ ಲಿಂಕನ್ ನೌಕೆಯಲ್ಲಿ ಮಾನಸಿಕ ಆರೋಗ್ಯದ ಬಿಕ್ಕಟ್ಟು ಉಂಟಾಗಿದೆ ಎಂಬುದನ್ನು ನಿರಾಕರಿಸಿತ್ತು.

ಕಾವೊ ಪತ್ರದಲ್ಲಿ, ನೌಕೆಯಲ್ಲಿ ತಾಜಾ ಆಹಾರದ ಕೊರತೆಯಿತ್ತು ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ, ತಾತ್ಕಾಲಿಕ ಸ್ಥಳೀಕೃತ ಪೈಪಿಂಗ್ ವೈಫಲ್ಯಗಳನ್ನು ಒಪ್ಪಿಕೊಂಡಿದ್ದಾರೆ. ಕೆಲವು ಆಹಾರದ ಆಯ್ಕೆಗಳು ಅಲ್ಪಾವಧಿಗೆ ಮಿತವಾಗಿತ್ತು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸೆನೆಟ್‌ನ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯೆಯಾಗಿರುವ ಸೆನೆಟರ್ ಗಿಲ್ಲಿಬ್ರಾಂಡ್, ಕಠಿಣ ಪರಿಸ್ಥಿತಿಗಳ ಕುರಿತ ವರದಿಗಳಿಗೆ ಟ್ರಂಪ್ ಆಡಳಿತ ಈ ಹಿಂದೆ ನೀಡಿದ್ದ ಪ್ರತಿಕ್ರಿಯೆಗಳನ್ನು ಟೀಕಿಸಿದ್ದಾರೆ. ಸೇನಾ ಸಿಬ್ಬಂದಿಯನ್ನು ನಡೆಸಿಕೊಂಡ ರೀತಿ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ ಹೆಗ್ಸೆತ್ ಅವರು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದ ವಿಷಯ, ನಮ್ಮ ಸೈನಿಕ ಸಿಬ್ಬಂದಿ ಎದುರಿಸುತ್ತಿದ್ದ ಗಂಭೀರ ಹಾಗೂ ಹದಗೆಡುತ್ತಿರುವ ಪರಿಸ್ಥಿತಿಗಳಾಗಿದ್ದವು ಎಂಬುದು ಇದೀಗ ಬಹಿರಂಗವಾಗಿದೆ ಎಂದು ಸೆನೆಟರ್ ಗಿಲ್ಲಿಬ್ರಾಂಡ್ ಬುಧವಾರ BBCಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸೈನಿಕರು ಮತ್ತು ಅವರ ಕುಟುಂಬ ಪ್ರತಿದಿನವೂ ಅಪಾರ ತ್ಯಾಗಗಳನ್ನು ಮಾಡುತ್ತಿದ್ದಾರೆ. ಆದರೆ, ಅಧ್ಯಕ್ಷರು ಅವರನ್ನು ಬಹಿರಂಗವಾಗಿ ಅಗೌರವದಿಂದ ನಡೆಸಿಕೊಂಡರು ಎಂದು ಸೆನೆಟರ್ ಗಿಲ್ಲಿಬ್ರಾಂಡ್ ಹೇಳಿದ್ದಾರೆ.

USS ಅಬ್ರಹಾಂ ಲಿಂಕನ್ ನೌಕೆ ನವೆಂಬರ್‌ನಲ್ಲಿ ಕ್ಯಾಲಿಫೋರ್ನಿಯಾದಿಂದ ದಕ್ಷಿಣ ಚೀನಾ ಸಮುದ್ರದತ್ತ ತೆರಳಿತ್ತು. ಬಳಿಕ ಫೆಬ್ರವರಿಯಲ್ಲಿ ಇರಾನ್ ಮೇಲೆ ದಾಳಿ ಆರಂಭವಾಗುವ ಮುನ್ನ ಅದನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲಾಗಿತ್ತು. ಮೇ ತಿಂಗಳಲ್ಲಿ ಕೊನೆಗೊಳ್ಳಬೇಕಿದ್ದ ಈ ನಿಯೋಜನಾ ಅವಧಿಯನ್ನು ಪದೇಪದೆ ವಿಸ್ತರಿಸಲಾಗಿತ್ತು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries