HEALTH TIPS

ವಾರದ ರಜೆ ಇಲ್ಲದೆ ನಿತ್ಯ 12 ಗಂಟೆ ಕೆಲಸ: ಸೂರತ್ ಜವಳಿ ಘಟಕದಲ್ಲೇ ಉಳಿವ ʼಕಾರ್ಮಿಕʼ

ಅಹಮದಾಬಾದ್‌: ಸೂರತ್‌ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ (ಅಕ್ಟೋಬರ್‌ 15) ಬೆಳಿಗ್ಗೆ 10ರ ಸುಮಾರಿಗೆ ನೂರಾರು ಜವಳಿ ಕಾರ್ಮಿಕರು ಜಮಾಯಿಸಿದ್ದರು. ಆದರೆ, ಅವರಲ್ಲಿ ಯಾರೊಬ್ಬರೂ ಒಳಗೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಲಾಠಿ ಹಿಡಿದಿದ್ದ ಸಾಕಷ್ಟು ಪೊಲೀಸರ ಕಣ್ಗಾವಲು ಅಲ್ಲಿತ್ತು.  


ಆದರೆ, ಕೆಲವು ಟಿವಿ ವಾಹಿನಿಗಳ ಪ್ರತಿನಿಧಿಗಳು ಅಲ್ಲಿಗೆ ಬಂದು ಹೋರಾಟನಿರತ ಕಾರ್ಮಿಕರಿಗೆ ಮೈಕ್‌ ಹಿಡಿದ ನಂತರ ಗದ್ದಲ ಆರಂಭವಾಯಿತು. ಪ್ರತಿಭಟನೆ ಜೋರಾಯಿತು.

ʼಮಾಲೀಕರು ನಮಗೆ ವಾರದ ರಜೆ ನೀಡುತ್ತಿಲ್ಲ. ಒಂದು ವೇಳೆ ರಜೆ ಪಡೆದದ್ದೇ ಆದರೆ ಹಾಜರಿ ಪುಸ್ತಕದಲ್ಲಿ ಗೈರು ಎಂದು ನಮೂದಿಸುತ್ತಾರೆ. ನಮ್ಮ ಆಧಾರ್‌ ಕಾರ್ಡ್‌ ಕಸಿದುಕೊಳ್ಳುತ್ತಾರೆ. ಕೆಲಸ ಕೊಡುವುದಿಲ್ಲ ಎಂದು ಬೆದರಿಸುತ್ತಾರೆ. ಪೊಲೀಸರಿಗೆ ದೂರು ನೀಡುವುದಾಗಿ ಧಮ್ಕಿ ಹಾಕುತ್ತಾರೆʼ ಎಂದು ಅಲ್ಲಿದ್ದವರಲ್ಲಿ ಒಬ್ಬ ವಿವರಿಸಿದ. ಸಮಸ್ಯೆಗಳ ಪಟ್ಟಿ ದೀರ್ಘವಾಗುತ್ತಾ ಹೋದಂತೆ ಅಲ್ಲಿದ್ದವರ ಆಕ್ರೋಶದ ಕಟ್ಟೆ ಹೊಡೆಯಿತು. ʼಅವರು (ಮಾಲೀಕರು) ನಮ್ಮನ್ನು ಹತ್ತಿಕ್ಕಲು ಪ್ರಯತ್ನಿಸಿದಷ್ಟೂ, ನಮ್ಮ ಪ್ರತಿಭಟನೆ ಬಲಗೊಳ್ಳುತ್ತದೆʼ ಎಂದು ಇಡೀ ಜನಸಮೂಹ ಕೂಗಿ ಹೇಳಿತು.

ಆದಾಗ್ಯೂ ಪ್ರತಿಭಟನೆ ಹೆಚ್ಚು ಹೊತ್ತು ನಡೆಯಲಿಲ್ಲ. ಪೊಲೀಸರು ಕಾರ್ಯಾಚರಣೆಗೆ ಇಳಿದರು. ಏಕಾಏಕಿ ಸ್ಥಳಕ್ಕೆ ಬಂದ ಬಸ್‌ಗಳಿಗೆ ಪ್ರತಿಭಟನಾಕಾರರನ್ನು ಹಿಡಿದೆಳೆದು ತುಂಬಿದರು. ಪ್ರಮುಖ ನಾಯಕರನ್ನು ವಶಕ್ಕೆ ಪಡೆದರು. ಹೀಗಾಗಿ, ಮುಂದಾಳತ್ವ ಕಳೆದುಕೊಂಡ ಪ್ರತಿಭಟನಾಕಾರರ ಆಕ್ರೋಶ ಸ್ವಲ್ಪದರಲ್ಲೇ ತಣ್ಣಗಾಯಿತು.

ಇಂಡಿಯನ್‌ ನ್ಯಾಷನಲ್‌ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ನ (ಐಎನ್‌ಟಿಯುಸಿ) ಗುಜರಾತ್‌ ಘಟಕ ಈ ಪ್ರತಿಭಟನೆಗೆ ಕರೆ ನೀಡಿತ್ತು. ಅದರ ಅಧ್ಯಕ್ಷ ನೈಷದ್‌ ದೇಸಾಯಿ, ಪ್ರಮುಖರಾದ ಸುರೇಶ್‌ ಸೋನವಾನೆ, ಮಲ್ಖಾನ್‌ ವರ್ಮಾ ಸೇರಿದಂತೆ ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತೊಬ್ಬ ಮುಖ್ಯ ಕಾರ್ಯಕರ್ತ ಅಜಯ್ ದುಬೆ ಎಂಬವರನ್ನು ಪ್ರತಿಭಟನೆ ಆರಂಭಕ್ಕೂ ಮೊದಲೇ ಸುಲಿಗೆ ಆರೋಪದ ಮೇಲೆ ಬಂಧಿಸಲಾಗಿತ್ತು.

ಬಿಕ್ಕಟ್ಟು ಏಕೆ?

ಕಸೂತಿ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕಳೆದ ಹಲವು ತಿಂಗಳುಗಳಿಂದ ಸರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೇತನ ಕಡಿತ ಮಾಡದೆ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಕೆಲಸದ ಅವಧಿಯನ್ನು 12ರ ಬದಲು 8 ಗಂಟೆಗೆ ಇಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ಆಗಸ್ಟ್ 16ರಂದು ಪ್ರತಿಭಟಿಸಿದ್ದರು. ಆದರೆ, ಹೋರಾಟಗಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಹೀಗಾಗಿ, ಗಲಭೆ ಮತ್ತು ಅಕ್ರಮವಾಗಿ ಗುಂಪುಗೂಡಿದ ಆರೋಪದಲ್ಲಿ ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಒಳನೋಟ: ಬಿಸಿ ಬಾಣಲೆಯಲ್ಲಿ ರೀಲರ್ಸ್ ಬದುಕುಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?

ಸೂರತ್‌ನ ಪ್ರಸಿದ್ಧ ಜವಳಿ ಉದ್ಯಮದಲ್ಲಿ ಇತ್ತೀಚಿನ ದಿನಗಳಲ್ಲಿ ಕಾರ್ಮಿಕರು ಮತ್ತು ಮಾಲೀಕರ ನಡುವೆ ಬಿರುಕು ಮೂಡಿರುವುದು ಇದೇ ಮೊದಲು. ಅಂದಾಜು 15-20 ಲಕ್ಷ ಜನರಿಗೆ ಉದ್ಯೋಗ ನೀಡುವ ಈ ಅಸಂಘಟಿತ ವಲಯವು ದಶಕಗಳಲ್ಲಿ ಹಲವು ಬಿಕ್ಕಟ್ಟುಗಳಿಂದ ತತ್ತರಿಸಿದೆ. ಆರ್ಥಿಕ ಹಿಂಜರಿತ, ಕೋವಿಡ್-19, ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಸಂಘರ್ಷದ ಪರಿಣಾಮಗಳು ಜವಳಿ ಉದ್ಯಮದ ಮೇಲೆ ಆಗಿವೆ.

ʼನಿತ್ಯ ಎಂಟು ತಾಸು ಕೆಲಸ, ಮೂರು ಪಾಳಿ, ವಾರದ ರಜೆ ಸಹಿತ ವಾರಕ್ಕೆ 48 ಗಂಟೆಗಳ ಕೆಲಸದ ಅವಧಿ ಇರಬೇಕು ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ ಮಾನದಂಡಗಳೇ ಹೇಳುತ್ತವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಯೂ ವಾರಕ್ಕೆ 48 ಗಂಟೆಗಳ ಕೆಲಸದ ನಿಯಮ ಜಾರಿಗೊಳಿಸಿದೆ. ಆದಾಗ್ಯೂ 12 ತಾಸು ದುಡಿಸಿಕೊಳ್ಳಲಾಗುತ್ತಿದೆ. ಅದನ್ನು ಬದಲಿಸಿಕೊಳ್ಳಬೇಕು. ಹಾಗೆಯೇ, ವೇತನ ಸಹಿತ ವಾರದ ರಜೆ ನೀಡಬೇಕುʼ ಎಂದು ಐಎನ್‌ಟಿಯುಸಿ ಅಧ್ಯಕ್ಷ ನೈಷದ್‌ ದೇಸಾಯಿ ಹೇಳಿದ್ದಾರೆ.

ಸೂರತ್ ಜವಳಿ ಉದ್ಯಮದಲ್ಲಿ ಹಲವು ದಶಕಗಳ ಅನುಭವ ಹೊಂದಿರುವುದಾಗಿ ಹೇಳಿರುವ ಅವರು, ʼಕಾರ್ಮಿಕರು ವಾರದ ರಜೆ ಕೇಳಿರುವುದು ಇದೇ ಮೊದಲು. ಕಾನೂನಿನಲ್ಲಿ ವೇತನ ಸಹಿತ ವಾರದ ರಜೆಗೆ ಅವಕಾಶವಿದೆ. ಅದನ್ನು ಭಾನುವಾರ ಇಲ್ಲವೇ ಸೋಮವಾರ ಅಥವಾ ಸರದಿ ಆಧಾರದಲ್ಲಿ ಯಾವುದೇ ದಿನ ನೀಡಬಹುದುʼ ಎಂದಿದ್ದಾರೆ.

ಇತ್ತೀಚಿಗೆ ನಡೆದ ಸಭೆಯಲ್ಲಿ ಕಾರ್ಮಿಕ ಸಂಹಿತೆಯನ್ನು ಜಾರಿ ಮಾಡಲು ಒಪ್ಪಿರುವ ಸೂರತ್‌ನ ಟೆಕ್ಸ್‌ಟೈಲ್ ಎಂಬ್ರಾಯ್ಡರಿ ಜಾಬ್‌ವರ್ಕ್ ಅಸೋಸಿಯೇಷನ್‌ (ಟಿಇಜೆಎಎಸ್‌), ವೇತನ ಸಹಿತ ವಾರದ ರಜೆ ಮತ್ತು ಕೆಲಸದ ಅವಧಿ ಕಡಿಮೆ ಮಾಡಲು ನಿರಾಕರಿಸಿದೆ. ಕಾರ್ಮಿಕರ ಬೇಡಿಕೆಗಳ ವಿಚಾರದಲ್ಲಿ ಕಸೂತಿ ಘಟಕಗಳ ಮಾಲೀಕರು ನಿರ್ಧಾರ ಬದಲಿಸಲು ನಿರಾಕರಿಸಿರುವುದರಿಂದ ಬಿಕ್ಕಟ್ಟು ಉಲ್ಬಣಿಸಿದೆ.

ಮಾಲೀಕರು ಹೇಳುವುದೇನು?

ʼಕಸೂತಿ ಘಟಕಗಳಲ್ಲಿ ಕೆಲಸ ಮಾಡುವ ಒಬ್ಬ ಕಾರ್ಮಿಕ ನಿತ್ಯ ಮಾಡುವ 12 ತಾಸುಗಳ ಕೆಲಸಕ್ಕೆ ಅನುಗುಣವಾಗಿ ಮಾಸಿಕ ₹ 25-30 ಸಾವಿರ ಗಳಿಸುತ್ತಾರೆ. ಪಾಳಿಯನ್ನು 8 ತಾಸಿಗೆ ಇಳಿಸಿದರೆ ವೇತನ ಕಡಿಮೆ ಮಾಡಬೇಕಾಗುತ್ತದೆ. ಇಲ್ಲವಾದರೆ, ಮಾಲೀಕರಿಗೆ ಹೊರೆಯಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಿಯಮ ಬದಲಾವಣೆ ಅಸಾಧ್ಯʼ ಎಂದು ಫೆಡರೇಷನ್‌ ಆಫ್‌ ಸೂರತ್ ಟೆಕ್ಸ್‌ಟೈಲ್ ಟ್ರೇಡರ್ಸ್ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಕೈಲಾಶ್ ಹಕೀಮ್ ಹೇಳಿದ್ದಾರೆ.

ಕರ್ನಾಟಕದ ನೂತನ ಜವಳಿ ನೀತಿ ಜಾರಿ, ₹4 ಸಾವಿರ ಕೋಟಿ ಆರ್ಥಿಕ ಬೆಂಬಲ, ಹೊಸದೇನಿದೆ?ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?

ʼಇಂಧನ, ಪಾಲಿಸ್ಟರ್ ಮತ್ತು ಇತರ ಕಚ್ಚಾ ಪದಾರ್ಥಗಳ ಬೆಲೆಗಳು ನಿರಂತರವಾಗಿ ಏರುತ್ತಿವೆ. ಇದರಿಂದ ಉದ್ಯಮವು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆʼ ಎಂದಿರುವ ಅವರು, ʼಕಾರ್ಮಿಕರನ್ನು ದಾರಿ ತಪ್ಪಿಸಲಾಗುತ್ತಿದೆ. ಇದರ ಹಿಂದೆ ರಾಜಕೀಯ ಇರಬಹುದು. ಸೂರತ್‌ನಲ್ಲಿ ಕಾರ್ಮಿಕರಿಗೆ ನೀಡುತ್ತಿರುವ ವೇತನವು ಬೇರೆಲ್ಲ ರಾಜ್ಯಗಳಿಗಿಂತ ಉತ್ತಮವಾಗಿದೆʼ ಎಂದು ಪ್ರತಿಪಾದಿಸಿದ್ದಾರೆ.

ಕೆಲಸಗಾರರೇ ಕಾರ್ಮಿಕ ಕಾನೂನುಗಳನ್ನು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದೂ ಆರೋಪಿಸಿರುವ ಅವರು, ʼಉದ್ಯಮಗಳು ಕಾರ್ಮಿಕರ ಭವಿಷ್ಯ ನಿಧಿ (ಪಿಎಫ್‌) ಮತ್ತು ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ನಿಯಮಗಳನ್ನು ಪಾಲಿಸಬೇಕು ಎಂದು ಸರ್ಕಾರವೇ ಹೇಳುತ್ತದೆ. ಆದರೆ ವೇತನದ ಒಂದು ಭಾಗವನ್ನು ಭವಿಷ್ಯ ನಿಧಿ ನೀಡಲು ಕಾರ್ಮಿಕರೇ ಒಪ್ಪುವುದಿಲ್ಲʼ ಎಂದಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಮಾಲೀಕ, ʼನಾವು ಹಲವು ವರ್ಷಗಳಿಂದ ಸೌಹಾರ್ದ ಮತ್ತು ಶಾಂತಿಯುತವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ವ್ಯವಸ್ಥೆಯನ್ನು ಹಾಳು ಮಾಡಲು ನೋಡುತ್ತಿದ್ದಾರೆ. ಒಕ್ಕೂಟದ ಕಾರ್ಮಿಕರು ಭಾನುವಾರ ಕಸೂತಿ ಘಟಕಗಳನ್ನು ಮುಚ್ಚುವಂತೆ ಒತ್ತಾಯಿಸಲಾರಂಭಿಸಿದ್ದಾರೆ. ಹಿಂದೆಂದೂ ಈ ರೀತಿ ಆಗಿರಲಿಲ್ಲ. ಈ ಬೆಳವಣಿಗೆ ಒಳ್ಳೆಯದಂತೂ ಅಲ್ಲʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಖಾನೆಯಲ್ಲೇ ಉಳಿವ ʼಕಾರ್ಮಿಕʼ

ಕೆಲವೊಂದು ಕಾರ್ಖಾನೆಗಳಲ್ಲಿ ಭಾರಿ ಶಬ್ಧವಿರುತ್ತದೆ. ಹೆಚ್ಚಿನ ಘಟಕಗಳಲ್ಲಿ ಗಾಳಿ ಬೆಳಕು ಕೂಡ ಸರಿಯಾಗಿ ಇರುವುದಿಲ್ಲ. ವಿಪರೀತ ಶೆಖೆ ಇರುತ್ತದೆ ಎಂಬ ಆರೋಪವಿದೆ. ಆದಾಗ್ಯೂ, ಸಾಕಷ್ಟು ಕಾರ್ಮಿಕರು ಅಲ್ಲಿಯೇ ವಾಸವಿದ್ದಾರೆ.

ಜೊತೆಯಲ್ಲಿ ಕುಟಂಬ ಇಲ್ಲದ ಅಥವಾ ಮದುವೆಯಾಗಿರದ ಕಾರ್ಮಿಕರು ಕಾರ್ಖಾನೆಯ ಒಂದು ಮೂಲೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಾರೆ. ಅಲ್ಲಿಯೇ ಮಲಗುತ್ತಾರೆ. ನಗರ ಅಥವಾ ಪಟ್ಟಣದಲ್ಲಿ ಕುಟುಂಬದೊಂದಿಗೆ ವಾಸಿಸುವುದು ದುಬಾರಿಯಾದೀತು ಎಂಬುದು ಅವರ ಲೆಕ್ಕಾಚಾರ.

ʼನಮಗೂ ಕುಟಂಬಗಳಿವೆ. ಮನೆಯವರೊಂದಿಗೆ ಮಾತನಾಡಲು ಸಮಯ ಬೇಡವೇ? ನಿತ್ಯ 12 ಗಂಟೆ ದುಡಿಯುವ ನಮಗೆ ಒಂದು ದಿನವಾದರೂ ರಜೆ ಬೇಕಲ್ಲವೇ? ಅಡುಗೆ ಮಾಡಿಕೊಳ್ಳಬೇಕು, ಸ್ನಾನ ಮಾಡಬೇಕು. ಬಟ್ಟೆ, ಪಾತ್ರೆಗಳನ್ನು ತೊಳೆಯುವುದಕ್ಕೆ ಸಮಯ ಬೇಕು ತಾನೆʼ ಎಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಬಂದಿರುವ ಸುಲ್ತಾನ್ ಮತ್ತು ನಂಕು ಖಾನ್ ಎಂಬ ಸಹೋದರರು ಅಳಲುತೋಡಿಕೊಂಡಿದ್ದಾರೆ.

ʼಪತ್ನಿಯನ್ನೂ ಸೂರತ್‌ಗೆ ಕರೆದುಕೊಂಡು ಬಂದಿದ್ದೆ. ಐದು ಸಾವಿರ ಬಾಡಿಕೆ ಕಟ್ಟುತ್ತಿದ್ದೆ. ನಿತ್ಯದ ಸಾಮಗ್ರಿಗಳ ಬೆಲೆ ಏರಿಕೆಯಾಗಿದೆ. ಮೊದಲು ಪ್ರತಿ ಕೆ.ಜಿ.ಗೆ ₹ 100ರಂತೆ ಸಿಗುತ್ತಿದ್ದ ಅಡುಗೆ ಅನಿಲದ ದರ ಈಗ ₹ 200 ಆಗಿದೆ. ಹೀಗಾಗಿ, ಇಲ್ಲಿ ಜೀವನ ನಡೆಸಲು ಆಗುವುದಿಲ್ಲ ಎಂದು ಆಕೆಯನ್ನು ವಾಪಸ್‌ ಕಳುಹಿದ್ದೇನೆʼ ಎನ್ನುತ್ತಾರೆ ಸುಲ್ತಾನ್‌. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries