HEALTH TIPS

ಪ್ರತಿಭಟನಾ ಮೆರವಣಿಗೆಗೂ ಮುನ್ನ ವಶಕ್ಕೆ ಪಡೆದಿದ್ದ ದೀಪ್ಕೆ, ನೇಹಾ ಬಿಡುಗಡೆ

ನವದೆಹಲಿ: 'ಲೆಹರಾ ದೋ ತಿರಂಗಾ' (ತ್ರಿವರ್ಣ ಧ್ವಜ ಹಾರಿಸಿ) ಪ್ರತಿಭಟನಾ ಮೆರವಣಿಗೆಗೂ ಮುನ್ನ ವಶಕ್ಕೆ ಪಡೆದಿದ್ದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರು ಷರತ್ತುಬದ್ಧ ಜಾಮೀನಿನ ಮೇರೆಗೆ ಶನಿವಾರ ಮಧ್ಯಾಹ್ನ ಬಿಡುಗಡೆಯಾದರು. ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ) ಮುಖ್ಯಸ್ಥೆ ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಶನಿವಾರ ಮುಂಜಾನೆಯೇ ಬಿಡುಗಡೆ ಮಾಡಿದರು. 


ದೀಪ್ಕೆ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಯಿತು. ಜಾಮೀನು ದೊರೆತ ಬಳಿಕ ಅವರು ತಮ್ಮ ಸ್ನೇಹಿತರ ಮನೆಗೆ ತೆರಳಿದರು.

ದೆಹಲಿಯ ಕನಾಟ್‌ ಪ್ಲೇಸ್‌ನ ಸೆಂಟ್ರಲ್‌ ಪಾರ್ಕ್‌ನಲ್ಲಿ ಸಿಜೆಪಿ ಶುಕ್ರವಾರ ಆಯೋಜಿಸಿದ್ದ 'ಲೆಹರಾ ದೋ ತಿರಂಗಾ' ಪ್ರತಿಭಟನಾ ಮೆರವಣಿಗೆಗೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಈ ಇಬ್ಬರನ್ನೂ ಶುಕ್ರವಾರ ವಶಕ್ಕೆ ಪಡೆದಿದ್ದರು.

ನೇಹಾ ಅವರನ್ನು ದೆಹಲಿ ಪೊಲೀಸ್‌ ಕಾಯ್ದೆಯ ಸೆಕ್ಷನ್‌ 65ರ ಅಡಿಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ದೀಪ್ಕೆ ಅವರನ್ನು ಭಾರತೀಯ ನಾಗರಿಕ ಸರುಕ್ಷಾ ಸಂಹಿತೆಯ ಸೆಕ್ಷನ್‌ 126 ಮತ್ತು 170ರ ಅಡಿ ಶಾಂತಿಭಂಗ ಉಂಟುಮಾಡಿದ ಆರೋಪದ ಮೇಲೆ ಹೊಸ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.

ಶಾಂತಿ ಪಾಲನೆಯ ಷರತ್ತು:

ದೀಪ್ಕೆ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅವರಿಗೆ ಶಾಂತಿಪಾಲನೆ ಕುರಿತು ಮುಚ್ಚಳಿಕೆ ಬರೆದುಕೊಡುವಂತೆ ಸೂಚಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಕೆಲ ದಿನಗಳ ಹಿಂದೆಯೂ (ಅಕ್ಟೋಬರ್‌ 10ರಂದು) ದೆಹಲಿಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದರಿಂದ ದೀಪ್ಕೆ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಅವರ ವಿರುದ್ಧ ಶಾಂತಿಭಂಗ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಆ ವೇಳೆ ಅವರು ಒಂದು ವರ್ಷದವರೆಗೆ ಶಾಂತಿ ಕದಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆ ಷರತ್ತನ್ನು ಉಲ್ಲಂಘಿಸಿದ ಆರೋಪದ ಮೇಲೆ ದೀಪ್ಕೆ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಅದಕ್ಕೂ ಮುನ್ನ ಪೊಲೀಸರು ದೀಪ್ಕೆ ಅವರಿಗೆ ಎರಡು ನೋಟಿಸ್‌ಗಳನ್ನು ನೀಡಿದ್ದರು. ಆದರೂ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅವರು ಮನೆಯಿಂದ ಹೊರಬರುತ್ತಿದ್ದಂತೆಯೇ ಮುನ್ನೆಚ್ಚರಿಕಾ ಕ್ರಮದ ಭಾಗವಾಗಿ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಮೂಲಗಳು ವಿವರಿಸಿವೆ.

ಕನಾಟ್‌ ಪ್ಲೇಸ್‌ ಸುತ್ತಮುತ್ತ ಪ್ರತಿಭಟನೆ, ಮೆರವಣಿಗೆ ಅಥವಾ ರ್‍ಯಾಲಿಯನ್ನು ನಿರ್ಬಂಧಿಸಿರುವ ಕುರಿತು ಹಾಗೂ ದೀಪ್ಕೆ, ಸೌರವ್‌, ಆಶುತೋಷ್‌ ರಾಂಕಾ ಅವರ ಮೇಲೆ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲೇಖಿಸಿ ನೋಟಿಸ್‌ಗಳನ್ನು ದೀಪ್ಕೆ ಅವರಿಗೆ ನೀಡಲಾಗಿತ್ತು.

ವೈಫೈ, ಫೋನ್‌ ಇಲ್ಲದೆ...:

ಜೈಲಿನಿಂದ ಬಿಡುಗಡೆಯಾದ ಬಳಿಕ ದೀಪ್ಕೆ ಅವರು 'ವೀರ್‌ ಝಾರಾ' ಚಿತ್ರದಲ್ಲಿ ನಟ ಶಾರುಕ್ ಖಾನ್‌ ಇರುವ ಚಿತ್ರವೊಂದನ್ನು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ. 'ವೈಫೈ ಮತ್ತು ಫೋನ್‌ ಇಲ್ಲದೆ 24 ಗಂಟೆಗಳ ಕಾಲ ಜೈಲಿನಲ್ಲಿ ಕಳೆದ ನಂತರ ಹೊರಬರುವಾಗ ಹೇಗೆನ್ನಿಸುತ್ತದೆ, ನೋಡಿ' ಎಂದು ಅವರು ಬರೆದುಕೊಂಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಅವರು ತಿಹಾರ್‌ ಜೈಲಿನಲ್ಲಿರುವ ಸಿಜೆಪಿ ಸಹ ಸಂಯೋಜಕರಾದ ಸೌರವ್ ದಾಸ್‌ ಮತ್ತು ಆಶುತೋಷ್‌ ರಾಂಕಾ ಅವರ ಚಿತ್ರವನ್ನು ಹಂಚಿಕೊಂಡಿದ್ದು, 'ನನ್ನ ಸಹೋದರರ ಬಿಡುಗಡೆಗಾಗಿ ಕಾಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ.

ಬಂಧನಗಳು ಅಕ್ರಮ- ಬೋರಾ ಆರೋಪ:

ಬಿಡುಗಡೆ ಆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನೇಹಾ ಬೋರಾ, 'ನನ್ನನ್ನು ಅಕ್ರಮವಾಗಿ ಬಂಧನದಲ್ಲಿರಿಸಲಾಗಿತ್ತು' ಎಂದು ದೆಹಲಿ ಪೊಲೀಸರು ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು.

'ನನ್ನನ್ನು ಮಂಡಿ ಹೌಸ್‌ನಲ್ಲಿ ವಶಕ್ಕೆ ಪಡೆದು, ರಾತ್ರಿಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿತ್ತು. ಅದು ಅಕ್ರಮ ಬಂಧನವಾಗಿತ್ತು' ಎಂದು ಕಿಡಿಕಾರಿದರು.

'ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು' ಎಂದು ಅವರು ಆಗ್ರಹಿಸಿದರು.

 ಅಭಿಜಿತ್‌ ದೀಪ್ಕೆ

ನಿಷೇಧಾಜ್ಞೆ ಉಲ್ಲಂಘನೆ: ಹಲವು ಎಫ್‌ಐಆರ್‌

ನವದೆಹಲಿ (ಪಿಟಿಐ): ನಿಷೇಧಾಜ್ಞೆ ಉಲ್ಲಂಘಿಸಿ ದೆಹಲಿಯ ಕನಾಟ್‌ ಪ್ಲೇಸ್‌ನಲ್ಲಿ ಗುಂಪುಗೂಡಿದ ಮತ್ತು ಪ್ರತಿಭಟನೆ ನಡೆಸಿದ ಆರೋಪಗಳ ಮೇಲೆ ದೆಹಲಿ ಪೊಲೀಸರು ಹಲವು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ಶನಿವಾರ ತಿಳಿಸಿವೆ. ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಶುಕ್ರವಾರ 'ಲೆಹರಾ ದೋ ತಿರಂಗಾ' ಪ್ರತಿಭಟನೆ ಹಮ್ಮಿಕೊಂಡಿದ್ದರಿಂದ ಪೊಲಿಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್‌ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಅದರ ನಡುವೆಯೂ ಕೆಲವರು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿ ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿದ್ದರು.

ದೆಹಲಿ ಪೊಲೀಸ್‌ ವಿರುದ್ಧ ಮಹಿಳೆಯರ ಪ್ರತಿಭಟನೆ

ನವದೆಹಲಿ (ಪಿಟಿಐ): ಮಹಿಳೆಯರು ಮತ್ತು ಟ್ರಾನ್ಸ್‌ಜೆಂಡರ್‌ ಪ್ರತಿಭಟನಕಾರರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ ಆರೋಪಗಳ ಮೇರೆಗೆ ಪೊಲೀಸ್‌ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಹಿಳಾ ಕಾರ್ಯಕರ್ತರು ಶನಿವಾರ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. 'ನೀವು ನಮಗೆ ಬೆದರಿಕೆ ಹಾಕಬಹುದು ಆದರೆ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ' ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭಗಳಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯಕ್ಕೆ ಹೊರಣೆಗಾರರು ಯಾರು ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. ಈ ಸಂಬಂಧ ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು ದೆಹಲಿ ಪೊಲೀಸ್‌ ಪ್ರಧಾನ ಕಚೇರಿಯತ್ತ ಮೆರವಣಿಗೆ ನಡೆಸಿದರು. 'ಮಹಿಳೆಯರು ಎಲ್ಲ ರೀತಿಯ ಶೋಷಣೆ ಮತ್ತು ದಮನದಿಂದ ಮುಕ್ತಿ ಬಯಸುತ್ತಾರೆ' ಎಂದು ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries