ಭೋಪಾಲ್: ಮಧ್ಯಪ್ರದೇಶದ ಶಿಯೋಪುರ ಅರಣ್ಯ ವಿಭಾಗದಲ್ಲಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ 19 ತಿಂಗಳ ಗಂಡು ಚೀತಾ ಬುಧವಾರ ಮುಂಜಾನೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬೇಟೆಯಾಡುವ ಯತ್ನದಿಂದ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಗೆ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡವನ್ನು ಸರ್ಕಾರ ರಚಿಸಿದೆ.
ಅಕ್ಟೋಬರ್ 25ರಂದು ಅರಣ್ಯ ಪ್ರದೇಶದ ಕಂಪಾರ್ಟ್‌ಮೆಂಟ್ ಸಂಖ್ಯೆ 748ರಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಚೀತಾವನ್ನು ಪತ್ತೆಹಚ್ಚಿ ರಕ್ಷಿಸಲಾಗಿತ್ತು. ತಕ್ಷಣವೇ ಪಶುವೈದ್ಯಕೀಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡಿದರೂ ಅದರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್ ಪರೀಕ್ಷೆಗಳಲ್ಲಿ ಚೀತಾದ ಆಂತರಿಕ ಅಂಗಗಳು ಹಾಗೂ ನರಮಂಡಲಕ್ಕೆ ಗಂಭೀರ ಗಾಯಗಳಾಗಿರುವುದು ಪತ್ತೆಯಾಗಿತ್ತು. ಬಳಿಕ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ ಅದರ ದೇಹದಿಂದ ಐದು ಗುಂಡಿನ ಸಣ್ಣ ಲೋಹದ ತುಣುಕುಗಳನ್ನು ವೈದ್ಯರು ಹೊರತೆಗೆದಿದ್ದರು. ಆದರೆ ಗಾಯಗಳ ತೀವ್ರತೆಯಿಂದಾಗಿ ಚೀತಾ ಮೃತಪಟ್ಟಿದೆ.
ವನ್ಯಜೀವಿಯ ಮೇಲೆ ಗುಂಡು ಹಾರಿಸಿದವರನ್ನು ಪತ್ತೆಹಚ್ಚಲು ಹಾಗೂ ಘಟನೆಗೆ ನಿಖರ ಕಾರಣ ತಿಳಿಯಲು ಸರ್ಕಾರ ಗಂಭೀರ ಕ್ರಮ ಕೈಗೊಂಡಿದೆ. ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವು ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. ವನ್ಯಜೀವಿಗಳ ಸುರಕ್ಷತೆಯನ್ನು ಬಲಪಡಿಸುವ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಚೀತಾ ಮರಿಗೂ ಗಾಯ
ಇದೇ ವೇಳೆ ಮೊರೆನಾ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ ‘ನಿರ್ವಾ’ ಎಂಬ ಹೆಣ್ಣು ಚೀತಾದ 19 ತಿಂಗಳ ಗಂಡು ಮರಿಯೂ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಕ್ಟೋಬರ್ 25ರ ಸಂಜೆ ಈ ಕುರಿತು ನಿಗಾ ತಂಡಕ್ಕೆ ಮಾಹಿತಿ ಲಭಿಸಿತ್ತು. ಅಂದು ರಾತ್ರಿಯೇ ಚೀತಾ ಮರಿಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಕೂನೋ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು.
ಚೀತಾ ಮರಿಯ ಗಾಯಗಳಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಒಂದೇ ಅವಧಿಯಲ್ಲಿ ಎರಡು ಚೀತಾಗಳು ಗಾಯಗೊಂಡಿರುವ ಘಟನೆ ವನ್ಯಜೀವಿಗಳ ಸುರಕ್ಷತೆಯ ಕುರಿತು ಆತಂಕ ಮೂಡಿಸಿದೆ.
ಸಮರಸ ಸುದ್ದಿ | www.samarasasudhi.com



