ವಿಶಾಖಪಟ್ಟಣಂ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಭಾರತೀಯ ನೌಕಾಪಡೆ ಹಾಗೂ ಸಿಂಗಾಪುರ ನೌಕಾಪಡೆ ಜಂಟಿಯಾಗಿ ನಡೆಸಿದ 33ನೇ ಆವೃತ್ತಿಯ ‘ಸಿಂಗಾಪುರ–ಇಂಡಿಯಾ ಮ್ಯಾರಿಟೈಮ್ ಬೈಲ್ಯಾಟರಲ್ ಎಕ್ಸರ್‌ಸೈಸ್’ (ಸಿಂಬೆಕ್ಸ್–2026) ಅಕ್ಟೋಬರ್ 26ರಂದು ವಿಶಾಖಪಟ್ಟಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಭಾರತೀಯ ನೌಕಾಪಡೆಯ ಆತಿಥ್ಯದಲ್ಲಿ ನಡೆದ ಈ ಸಮರಾಭ್ಯಾಸವು ಉಭಯ ದೇಶಗಳ ನೌಕಾಪಡೆಗಳ ನಡುವಿನ ಸಹಕಾರ, ಕಾರ್ಯಾಚರಣಾ ಸಾಮರ್ಥ್ಯ ಮತ್ತು ಪರಸ್ಪರ ಸಮನ್ವಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿತ್ತು.
ಈ ಸಂದರ್ಭದಲ್ಲಿ ಸಿಂಗಾಪುರ ನೌಕಾಪಡೆಯ ಫ್ಲೀಟ್ ಕಮಾಂಡರ್ ಕರ್ನಲ್ ಬರ್ಟ್ರಮ್ ಆಂಗ್ ಅವರು ಭಾರತೀಯ ನೌಕಾಪಡೆಯ ಈಸ್ಟರ್ನ್ ಫ್ಲೀಟ್‌ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ರಿಯರ್ ಅಡ್ಮಿರಲ್ ವಿಶಾಲ್ ಬಿಷ್ಣೋಯಿ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವಿನ ನೌಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಿದರು.
ಎರಡು ಹಂತಗಳಲ್ಲಿ ಸಮರಾಭ್ಯಾಸ
‘ಸಿಂಬೆಕ್ಸ್–2026’ ಅನ್ನು ಬಂದರು ಹಂತ ಮತ್ತು ಸಮುದ್ರ ಹಂತ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಬಂದರು ಹಂತದಲ್ಲಿ ತಜ್ಞರ ಸಂವಾದ, ಅಧಿಕಾರಿಗಳ ಪರಸ್ಪರ ಭೇಟಿಗಳು, ಕ್ರೀಡಾ ಸ್ಪರ್ಧೆಗಳು ಹಾಗೂ ಕಾರ್ಯಾಚರಣಾ ಯೋಜನಾ ಸಭೆಗಳು ನಡೆದವು.
ಬಂಗಾಳ ಕೊಲ್ಲಿಯಲ್ಲಿ ನಡೆದ ಸಮುದ್ರ ಹಂತದಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳು, ವಾಯು ಮತ್ತು ಮೇಲ್ಮೈ ರಕ್ಷಣಾ ಅಭ್ಯಾಸಗಳು ಹಾಗೂ ನೌಕಾ ವಿಮಾನಗಳ ಜಂಟಿ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಈ ಚಟುವಟಿಕೆಗಳು ಎರಡೂ ನೌಕಾಪಡೆಗಳ ನಡುವಿನ ಕಾರ್ಯಾಚರಣಾ ಸಮನ್ವಯವನ್ನು ಹೆಚ್ಚಿಸಲು ನೆರವಾದವು ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಅತ್ಯಾಧುನಿಕ ಯುದ್ಧನೌಕೆಗಳ ಭಾಗಿ
ಸಿಂಗಾಪುರ ನೌಕಾಪಡೆಯ ‘ಆರ್‌ಎಸ್‌ಎಸ್ ಸುಪ್ರೀಮ್’ ಸ್ಟೆಲ್ತ್ ಫ್ರಿಗೇಟ್ ಹಾಗೂ ಎಸ್‌ಎಚ್–70ಬಿ ಹೆಲಿಕಾಪ್ಟರ್ ಈ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು.
ಭಾರತದ ಪರವಾಗಿ ಸ್ವದೇಶಿ ನಿರ್ಮಿತ ಸ್ಟೆಲ್ತ್ ಫ್ರಿಗೇಟ್ ‘ಐಎನ್‌ಎಸ್ ನೀಲಗಿರಿ’, ಜಲಾಂತರ್ಗಾಮಿ ವಿರೋಧಿ ಕಾರ್ವೆಟ್ ‘ಐಎನ್‌ಎಸ್ ಕಮೋರ್ತಾ’, ಪಿ–8ಐ ಮತ್ತು ಡೋರ್ನಿಯರ್ ವಿಮಾನಗಳು, ಹಾಕ್ ಅಡ್ವಾನ್ಸ್ಡ್ ಜೆಟ್ ತರಬೇತಿ ವಿಮಾನಗಳು ಹಾಗೂ ಎಂಎಚ್–60ಆರ್ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು.
ಭಾರತ ಮತ್ತು ಸಿಂಗಾಪುರ ನಡುವಿನ ದೀರ್ಘಕಾಲದ ರಕ್ಷಣಾ ಸಹಕಾರವನ್ನು ಬಲಪಡಿಸುವುದರ ಜೊತೆಗೆ, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವ ಉಭಯ ರಾಷ್ಟ್ರಗಳ ಬದ್ಧತೆಯನ್ನು ಈ ಜಂಟಿ ನೌಕಾ ಸಮರಾಭ್ಯಾಸ ಪ್ರತಿಬಿಂಬಿಸಿದೆ.
ಸಮರಸ ಸುದ್ದಿ | www.samarasasudhi.com



