ನವದೆಹಲಿ (PTI): ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಿಂದ ಸರಕುಗಳ ರಫ್ತು ಶೇ 23ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಗುರುವಾರ ತಿಳಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ ಸರಕುಗಳು, ರಾಸಾಯನಿಕ ವಸ್ತುಗಳ ರಫ್ತು ಹೆಚ್ಚಳವಾಗಿದೆ. ಇದು ಒಟ್ಟಾರೆ ರಫ್ತು ಏರಿಕೆಗೆ ಕಾರಣ ಎಂದಿದೆ.
ಕಳೆದ ತಿಂಗಳು ದೇಶದಿಂದ ₹4.21 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದರೆ, ₹7.07 ಲಕ್ಷ ಕೋಟಿ ಮೌಲ್ಯದ ಸರಕುಗಳು ಆಮದಾಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಆಮದು ಶೇ 8ರಷ್ಟು ಹೆಚ್ಚಳವಾಗಿದೆ. ವ್ಯಾಪಾರ ಕೊರತೆ ₹2.86 ಲಕ್ಷ ಕೋಟಿಯಷ್ಟಾಗಿದೆ.
ಚಿನ್ನ ಮತ್ತು ಬೆಳ್ಳಿ ಆಮದು ಕ್ರಮವಾಗಿ ಶೇ 81 ಮತ್ತು ಶೇ 49ರಷ್ಟು ಇಳಿಕೆಯಾಗಿದೆ. ಕಚ್ಚಾ ತೈಲ ಆಮದು ಶೇ 30ರಷ್ಟು ಹೆಚ್ಚಳವಾಗಿದ್ದು, ₹1.73 ಲಕ್ಷ ಕೋಟಿಯಷ್ಟಾಗಿದೆ.
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆದೇಶದಿಂದ ₹24.64 ಲಕ್ಷ ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ. ಇದೇ ವೇಳೆ ₹41.48 ಲಕ್ಷ ಕೋಟಿ ಮೊತ್ತದ ಸರಕುಗಳು ಆಮದಾಗಿದ್ದು, ವ್ಯಾಪಾರ ಕೊರತೆ ₹16.84 ಲಕ್ಷ ಕೋಟಿಯಷ್ಟಾಗಿದೆ.
ಚೀನಾ: ಭಾರತದ ಅತಿದೊಡ್ಡ ಪಾಲುದಾರ
ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಚೀನಾವು, ಅಮೆರಿಕವನ್ನು ಹಿಂದಿಕ್ಕಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ.
ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಭಾರತ ಮತ್ತು ಚೀನಾದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಹಣಕಾಸಿನ ಮೌಲ್ಯದಲ್ಲಿ ₹8.69 ಲಕ್ಷ ಕೋಟಿಯಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹6.74 ಲಕ್ಷ ಕೋಟಿಯಷ್ಟಾಗಿತ್ತು. ಇದಕ್ಕೆ ಹೋಲಿಸಿದರೆ ಮೌಲ್ಯವು ಶೇ 29ರಷ್ಟು ಏರಿಕೆ ಕಂಡಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವು ಶೇ 16ರಷ್ಟು ಹೆಚ್ಚಳವಾಗಿದ್ದು, ₹7.87 ಲಕ್ಷ ಕೋಟಿಯಾಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.



