ಟೆಲ್ ಅವೀವ್: ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಅಪಹರಣ ಯತ್ನದ ಬಳಿಕ ಪಾಕಿಸ್ತಾನ ಸೇರಿದಂತೆ 31 ಮುಸ್ಲಿಂ ದೇಶಗಳ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಇಸ್ರೇಲ್ ನಿಷೇಧ ಹೇರಿದೆ.
ವಿಮಾನ ಅಪಹರಣದ ಸಂಚನ್ನು ವಿಫಲಗೊಳಿಸುವ ಸಂದರ್ಭದಲ್ಲಿ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರು.
ಈ ಘಟನೆಯ ಬೆನ್ನಲ್ಲೇ ಇಸ್ರೇಲ್ನಿಂದ ಈ ನಿರ್ದೇಶನ ಹೊರಬಿದ್ದಿದೆ.
ಅಕ್ಟೋಬರ್ 1ರಂದೇ ಇಸ್ರೇಲ್ ಸಚಿವಾಲಯವು ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಈ ನಿರ್ಬಂಧಗಳ ಕುರಿತು ಮಾಹಿತಿ ನೀಡಿತ್ತು.
ಇಸ್ರೇಲ್ನ ವಾಯುಪ್ರದೇಶಕ್ಕೆ ಹಾರಾಟ ನಡೆಸುವ ವಿಮಾನಗಳ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿ, ಇಸ್ರೇಲ್ನೊಂದಿಗೆ ಅಧಿಕೃತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದ ದೇಶಗಳ ಪೌರತ್ವ ಅಥವಾ ದ್ವಿಪೌರತ್ವವನ್ನು ಹೊಂದಿರಬಾರದು ಎಂದು ಉಲ್ಲೇಖಿಸಲಾಗಿದೆ.
ಪಾಕಿಸ್ತಾನ, ಇರಾನ್, ಒಮಾನ್, ಸೌದಿ ಅರೇಬಿಯಾ, ಅಲ್ಜೀರಿಯಾ ಮತ್ತು ಟುನೀಶಿಯಾ ಸೇರಿದಂತೆ 31 ಮುಸ್ಲಿಂ ದೇಶಗಳು ಹಾಗೂ ಈ ದೇಶಗಳ ದ್ವಿಪೌರತ್ವ ಹೊಂದಿರುವವರಿಗೆ ಈ ನಿರ್ಬಂಧಗಳು ಅನ್ವಯವಾಗಲಿವೆ.
ಈ ನಿರ್ಬಂಧಗಳಿಂದಾಗಿ ಏರ್ ಫ್ರಾನ್ಸ್ ತನ್ನ ಸಿಬ್ಬಂದಿ ನಿಯೋಜನೆ ಬದಲಾಯಿಸಿಕೊಂಡಿದೆ. ಯುನೈಟೆಡ್ ಏರ್ಲೈನ್ಸ್ ಸಹ ತನ್ನ ಉದ್ಯೋಗಿಗಳಿಗೆ ಇಸ್ರೇಲ್ ನೀತಿಯ ಬಗ್ಗೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ವಿದೇಶಿ ನಾಗರಿಕ ವಿಮಾನಯಾನದ ಭದ್ರತಾ ಪ್ರಕ್ರಿಯೆಗಳ ಪರಿಶೀಲನೆಗೆ ಆದೇಶಿಸಿದ್ದಾರೆ.
ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನವನ್ನು ವಶಕ್ಕೆ ತೆಗೆದುಕೊಂಡು ಪತನಗೊಳಿಸಲು ಒಮಾನ್ ಮೂಲದ ಸಹ ಪೈಲಟ್ ಯತ್ನಿಸಿದ್ದ. ವಿಮಾನ ಚಾಲನೆ ಮಾಡುತ್ತಿದ್ದ ಭಾರತ ಮೂಲದ ಪೈಲಟ್ ಸ್ಮಿತ್ ಮಚ್ಚರ್ ದುರಂತವನ್ನು ತಪ್ಪಿಸಿದ್ದರು. ವಿಮಾನದಲ್ಲಿ 174 ಪ್ರಯಾಣಿಕರಿದ್ದರು.
ತೀವ್ರ ಗಾಯಗಳಾಗಿದ್ದರೂ ಮಚ್ಚರ್ ಅವರು ಕಾಕ್ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಸಹ ಪೈಲಟ್ನನ್ನು ವಶಕ್ಕೆ ಪಡೆದಿದ್ದರು. ಸದ್ಯ ಮಚ್ಚರ್ ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುರಂತ ತಡೆದ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಜಾಗತಿಕ ನಾಯಕರು 'ಹೀರೊ' ಎಂದು ಶ್ಲಾಘಿಸಿದ್ದರು.



