ದುಬೈ: ಯೆಮನ್ನ ಸರ್ಕಾರದ ಪ್ರಧಾನ ಕಚೇರಿ ಮೇಲೆ ಹೂಥಿ ಬಂಡುಕೋರರು ಗುರುವಾರ ಕ್ಷಿಪಣಿಗಳ ಸರಣಿ ದಾಳಿ ನಡೆಸಿದ್ದು, ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.
ದಕ್ಷಿಣ ಯೆಮನ್ನ ಅಡೆನ್ ನಗರದಲ್ಲಿರುವ ಮಾಆಶಿಕ್ ಅರಮನೆಯ ಮೇಲೆ ದಾಳಿ ನಡೆಸ ಹೂಥಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 16 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಾನ್ಯತೆ ಪಡೆದಿರುವ ಯೆಮನ್ ಸರ್ಕಾರದ ಕೇಂದ್ರ ಕಚೇರಿ ಈ ಅರಮನೆಯಲ್ಲಿದೆ.
ದಾಳಿಯಲ್ಲಿ ಪ್ರಧಾನಿ ಶಾಯೆ ಅಲ್-ಝಂದಾನಿ ಅವರಿಗೆ ಏನೂ ಆಗಿಲ್ಲ ಎಂದು ಯೆಮನ್ ಮಾಹಿತಿ ಸಚಿವ ಮೊಅಮ್ಮರ್ ಅಲ್-ಎರ್ಯಾನಿ ತಿಳಿಸಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಅವರು ಅರಮನೆಯಲ್ಲಿ ಇದ್ದರೇ ಎಂಬುದು ಸ್ಪಷ್ಟವಾಗಿಲ್ಲ.
ಅರಮನೆಗೆ ಉಂಟಾಗಿರುವ ಹಾನಿಯ ಪ್ರಮಾಣ ತಿಳಿದುಬಂದಿಲ್ಲ. ಆದರೆ, ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಡಿಯೊಗಳಲ್ಲಿ ಕಟ್ಟಡದ ಸಮೀಪದಿಂದ ಹೊಗೆ ಏಳುತ್ತಿದ್ದು, ಒಂದು ಮೈಲಿಗೂ ಹೆಚ್ಚು ದೂರದಿಂದಲೂ ಅದು ಗೋಚರಿಸುತ್ತಿತ್ತು.
2015ರಲ್ಲಿ ಹೂಥಿಗಳು ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಯೆಮನ್ನಲ್ಲಿ ದೀರ್ಘಕಾಲದ ಯುದ್ಧ ಆರಂಭವಾಯಿತು. ಅಂದಿನಿಂದ ಅಡೆನ್ ನಗರವು ಯೆಮನ್ ಸರ್ಕಾರದ ಆಡಳಿತ ಕೇಂದ್ರವಾಗಿದೆ. ದಕ್ಷಿಣ ಯೆಮನ್ನಲ್ಲಿ ಸರ್ಕಾರಕ್ಕೆ ಅಧಿಕೃತ ಅಧಿಕಾರವಿದ್ದರೂ, ಅದರ ಆಡಳಿತ ಸೀಮಿತವಾಗಿದೆ. ಹಲವು ವರ್ಷಗಳಿಂದ ಸರ್ಕಾರದ ಬಹುತೇಕ ಕಾರ್ಯಗಳು ಸೌದಿ ಅರೇಬಿಯಾದ ರಿಯಾದ್ನಿಂದಲೇ ನಡೆಯುತ್ತಿವೆ.
ಅರಮನೆ ಮೇಲಿನ ದಾಳಿಯ ಬೆನ್ನಲ್ಲೇ, ಸೌದಿ ಬೆಂಬಲಿತ ಯೆಮನ್ ಸರ್ಕಾರವು ಮಧ್ಯ ಯೆಮನ್ನ ತೈಲಸಮೃದ್ಧ ನಗರವಾದ ಮಾರಿಬ್ ಮೇಲೆಯೂ ಹೂಥಿಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ ಎಂದು ತಿಳಿಸಿದೆ.
ಅಡೆನ್ನಲ್ಲಿರುವ ಶತ್ರು ಸೌದಿಯ ಸೇನಾ ಕಾರ್ಯಾಚರಣೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೂಥಿ ಬಂಡುಕೋರರ ಸೇನಾ ವಕ್ತಾರ ಯಾಹ್ಯಾ ಸರೀ ಹೇಳಿದ್ದಾರೆ. ಆದರೆ, ಮಾರಿಬ್ ಮೇಲಿನ ದಾಳಿಗಳ ಬಗ್ಗೆ ಅವರು ಪ್ರಸ್ತಾಪಿಸಿಲ್ಲ.



