ಮನೆ ಬಾಗಿಲಿಗೇ ತಜ್ಞ ವೈದ್ಯಕೀಯ ಸೇವೆ – ಗುಡ್ಡಗಾಡು ಪ್ರದೇಶದ ರೈತರಿಗೆ ವರದಾನವಾದ ಮೊಬೈಲ್ ವೆಟರ್ನರಿ ಕ್ಲಿನಿಕ್
ಕಾಸರಗೋಡು: ಗುಡ್ಡಗಾಡು ಪ್ರದೇಶದ ಕ್ಷೀರೋತ್ಪಾದಕ ರೈತರಿಗೆ ಪರಪ್ಪ ಬ್ಲಾಕ್ ಪಂಚಾಯತ್‌ನ ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯ ಆಸರೆಯಾಗಿದೆ. ಜಾನುವಾರುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯಾಸವನ್ನು ತಪ್ಪಿಸಿ, ರೈತರ ಮನೆಬಾಗಿಲಿಗೇ ತಜ್ಞ ವೈದ್ಯಕೀಯ ಸೇವೆ ಒದಗಿಸುವ ಮೂಲಕ ಈ ಯೋಜನೆ ಗಮನ ಸೆಳೆಯುತ್ತಿದೆ. ಇದುವರೆಗೆ ಈ ಸಂಚಾರಿ ಘಟಕದ ಮೂಲಕ 4,000ಕ್ಕೂ ಅಧಿಕ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಬ್ಲಾಕ್ ಪಂಚಾಯತ್‌ನ ವಾರ್ಷಿಕ ಯೋಜನೆಯಡಿ 2022ರ ನವೆಂಬರ್ 1ರಂದು ಮೊಬೈಲ್ ವೆಟರ್ನರಿ ಕ್ಲಿನಿಕ್ ಕಾರ್ಯಾರಂಭ ಮಾಡಿತ್ತು. ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಈ ಘಟಕ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಪ್ರತಿ ತಿಂಗಳು 70ರಿಂದ 80ರಷ್ಟು ಚಿಕಿತ್ಸಾ ಪ್ರಕರಣಗಳು ವರದಿಯಾಗುತ್ತಿವೆ. ಮುಖ್ಯವಾಗಿ ಹಸು ಮತ್ತು ಮೇಕೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳನ್ನೂ ರೈತರ ಮನೆಗಳಲ್ಲೇ ನಡೆಸಲಾಗುತ್ತಿದೆ.
ಸವಾಲಿನ ತುರ್ತು ಚಿಕಿತ್ಸೆಗಳಿಗೂ ರೈತರ ಮನೆಬಾಗಿಲಿಗೆ ತೆರಳಿ ಸೇವೆ ಒದಗಿಸಲು ಈ ಯೋಜನೆಯಿಂದ ಸಾಧ್ಯವಾಗಿದೆ. ಪಶುವೈದ್ಯ ಶಸ್ತ್ರಚಿಕಿತ್ಸಕ ಡಾ. ಆಲ್ವಿನ್ ಜೇಮ್ಸ್‌ಕುಟ್ಟಿ ಅವರು ಘಟಕದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದುವರೆಗೆ ಅವರು 3,300ಕ್ಕೂ ಅಧಿಕ ಚಿಕಿತ್ಸಾ ಪ್ರಕರಣಗಳನ್ನು ನಿರ್ವಹಿಸಿದ್ದಾರೆ.
ಬಾನಂ ಪ್ರದೇಶದ ರೈತರೊಬ್ಬರ ಹಸುವಿಗೆ ಹೆರಿಗೆಯ ಬಳಿಕ ಗರ್ಭಕೋಶ ಹೊರಬಂದಿದ್ದ ಸಂದರ್ಭದಲ್ಲಿ ಸಂಚಾರಿ ಪಶುವೈದ್ಯಕೀಯ ಘಟಕ ನೆರವಿಗೆ ಧಾವಿಸಿತ್ತು. ಸಾರಿಗೆ ಸೌಲಭ್ಯ ಕಡಿಮೆ ಇರುವ ಗುಡ್ಡಗಾಡು ಪ್ರದೇಶದಲ್ಲಿ ಜಾನುವಾರುಗಳಿಗೆ ಅನಾರೋಗ್ಯ ಉಂಟಾದಾಗ ಅವುಗಳನ್ನು ಆಸ್ಪತ್ರೆಗೆ ಸಾಗಿಸುವುದು ರೈತರಿಗೆ ದೊಡ್ಡ ಸವಾಲಾಗಿತ್ತು. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಮೊಬೈಲ್ ವೆಟರ್ನರಿ ಘಟಕ ಕಾರ್ಯನಿರ್ವಹಿಸುತ್ತಿದೆ.



