ಪರಪ್ಪ ಬ್ಲಾಕ್‌ನ 10 ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ; ನೀತಿ ಆಯೋಗದಿಂದ ₹20 ಲಕ್ಷ ಅನುದಾನ
ಕಾಸರಗೋಡು: ಭೂಪಟಗಳು, ತ್ರಿಡಿ ಮಾದರಿಗಳು ಹಾಗೂ ಡಿಜಿಟಲ್ ದೃಶ್ಯಾವಳಿಗಳ ಮೂಲಕ ಭೂಗೋಳಶಾಸ್ತ್ರದ ಕಲಿಕೆಗೆ ಹೊಸ ಅನುಭವ ನೀಡುವ ಜಿಯೋಗ್ರಾಫಿಕಲ್ ಲರ್ನಿಂಗ್ ಲ್ಯಾಬ್‌ಗಳು ಪರಪ್ಪ ಬ್ಲಾಕ್‌ನ ಸರ್ಕಾರಿ ಶಾಲೆಗಳಲ್ಲಿ ಸಿದ್ಧಗೊಂಡಿವೆ.
ಪರಪ್ಪ ಆಸ್ಪಿರೇಷನಲ್ ಬ್ಲಾಕ್ ಕಾರ್ಯಕ್ರಮದ ಅಂಗವಾಗಿ ಬ್ಲಾಕ್ ವ್ಯಾಪ್ತಿಯ ಏಳು ಗ್ರಾಮ ಪಂಚಾಯತ್‌ಗಳಲ್ಲಿರುವ ಚಿತ್ತಾರಿಕಲ್ ಉಪಜಿಲ್ಲೆಯ 10 ಸರ್ಕಾರಿ ಶಾಲೆಗಳಲ್ಲಿ ಜಿಯೋ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ನೀತಿ ಆಯೋಗ ನೀಡಿದ ₹20 ಲಕ್ಷ ಅನುದಾನವನ್ನು ಬಳಸಿಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಭೂಗೋಳಶಾಸ್ತ್ರದ ಕಲಿಕೆಯನ್ನು ಹೆಚ್ಚು ಅನುಭವಾತ್ಮಕ ಹಾಗೂ ದೃಶ್ಯಾಧಾರಿತವಾಗಿಸುವ ಉದ್ದೇಶದಿಂದ ಈ ಪ್ರಯೋಗಾಲಯಗಳನ್ನು ವಿನ್ಯಾಸಗೊಳಿಸಲಾಗಿದೆ. ಭೂಪಟಗಳು, ತ್ರಿಡಿ ಮಾದರಿಗಳು, ಸಂವಾದಾತ್ಮಕ ಪ್ರದರ್ಶನ ವ್ಯವಸ್ಥೆಗಳು ಹಾಗೂ ಡಿಜಿಟಲ್ ಪ್ರಸರಣ ಸೌಲಭ್ಯಗಳನ್ನು ಒಳಗೊಂಡ ಗ್ಯಾಲಕ್ಸಿ ಥಿಯೇಟರ್‌ಗಳು ವಿದ್ಯಾರ್ಥಿಗಳಿಗೆ ಭೌಗೋಳಿಕ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ.
ವಿಷಯಗಳನ್ನು ಕೇವಲ ಕಂಠಪಾಠ ಮಾಡುವ ಬದಲು ದೃಶ್ಯಾವಳಿಗಳು ಮತ್ತು ಪ್ರಾಯೋಗಿಕ ಅನುಭವಗಳ ಮೂಲಕ ಜ್ಞಾನ ಸಂಪಾದಿಸಲು ಈ ವ್ಯವಸ್ಥೆ ಅವಕಾಶ ಕಲ್ಪಿಸುತ್ತದೆ.
ಕಾಸರಗೋಡು ಸಮಗ್ರ ಶಿಕ್ಷಣ ಕೇರಳ ಮತ್ತು ಚಿತ್ತಾರಿಕಲ್ ಬಿಆರ್‌ಸಿ ಸಂಯುಕ್ತವಾಗಿ ಗ್ಯಾಲಕ್ಸಿ ಥಿಯೇಟರ್‌ಗಳನ್ನು ಸಜ್ಜುಗೊಳಿಸಿವೆ. ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ಕಲಿಕಾ ವಿಧಾನದಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.
ಜಿ.ಎಚ್.ಎಸ್.ಎಸ್ ಅಟ್ಟೇಂಗಾನಂ, ಕೊಟ್ಟೋಡಿ, ಚಾಯ್ಯೋತ್, ಮಾಲೋತ್ ಕಸಬ, ಪರಪ್ಪ, ಬಾಳಾಲ್, ಪೆರುಂಬಟ್ಟ, ಬಾಳಾಂತೋಡ್, ಜಿ.ಎಚ್.ಎಸ್. ತಯ್ಯೇನಿ ಮತ್ತು ಕಾಲಿಚಾನಡುಕ್ಕಂ ಶಾಲೆಗಳಲ್ಲಿ ಜಿಯೋ ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ.
ಪರಪ್ಪ ಬ್ಲಾಕ್‌ನ ಆಸ್ಪಿರೇಷನಲ್ ಬ್ಲಾಕ್ ಯೋಜನೆಯ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿರುವ ಈ ಪ್ರಯತ್ನವು ಭೂಗೋಳಶಾಸ್ತ್ರದ ಕಲಿಕೆಯನ್ನು ಸರಳ, ಆಸಕ್ತಿದಾಯಕ ಹಾಗೂ ಅನುಭವಪೂರ್ಣವಾಗಿಸುವ ಮಾದರಿ ಯೋಜನೆಯಾಗಿ ಮೂಡಿಬಂದಿದೆ.



