ರಿಯೊ ಡಿ ಜನೈರೊ: ಬ್ರೆಜಿಲ್‌ನ ಎಡಪಂಥೀಯ ನಾಯಕ ಹಾಗೂ ಹಾಲಿ ಅಧ್ಯಕ್ಷ ಲೂಲಾ ಡಾ ಸಿಲ್ವಾ ಅವರು ಭಾನುವಾರ ತೀವ್ರ ಜಿದ್ದಾಜಿದ್ದಿಯಿಂದ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ.
ಮೊದಲ ಸುತ್ತಿನ ಮತದಾನದಲ್ಲಿ ಸಮಬಲ ಸಾಧಿಸಿದ್ದ 80 ವರ್ಷದ ಲೂಲಾ, ಎರಡನೇ ಸುತ್ತಿನ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಫ್ಲಾವಿಯೊ ಬೋಲ್ಸನಾರೊ ಅವರನ್ನು ಮಣಿಸಿ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
ಬ್ರೆಜಿಲ್ ಮಾಧ್ಯಮಗಳು ಮತ್ತು 'ಡೇಟಾಫೋಲ್ಹಾ' (Datafolha) ಸಮೀಕ್ಷೆಯ ಪ್ರಕಾರ, ಶೇ 99.77ರಷ್ಟು ಮತ ಎಣಿಕೆ ಪೂರ್ಣಗೊಂಡಾಗ, ಹಾಲಿ ಅಧ್ಯಕ್ಷ ಲೂಲಾ ಅವರು ಶೇ 51.76ರಷ್ಟು ಮತಗಳನ್ನು ಪಡೆದರೆ, ಬೋಲ್ಸನಾರೊ ಜೂನಿಯರ್ ಶೇ 48.24ರಷ್ಟು ಮತಗಳನ್ನು ಗಳಿಸಿದ್ದಾರೆ.
ಈ ಗೆಲುವಿನೊಂದಿಗೆ ಕಾರ್ಮಿಕರ ಪಕ್ಷದ ನಾಯಕರಾಗಿರುವ ಲೂಲಾ ಅವರು ಗೆಟುಲಿಯೊ ವರ್ಗಾಸ್ ಅವರ ನಂತರ ಬ್ರೆಜಿಲ್‌ನಲ್ಲಿ ಅತಿ ಹೆಚ್ಚು ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಅಧಿಕಾರಾವಧಿ ಮುಕ್ತಾಯಗೊಳ್ಳುವ ಹೊತ್ತಿಗೆ ಅವರು ಒಟ್ಟು 16 ವರ್ಷಗಳ ಕಾಲ ಆಡಳಿತ ನಡೆಸಲಿದ್ದು, ಬ್ರೆಜಿಲ್‌ನ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಹೊಸ ದಾಖಲೆಯಾಗಲಿದೆ.
ದರ ಏರಿಕೆ, ಅಪರಾಧ, ಮತ್ತು ಭ್ರಷ್ಟಾಚಾರದಂತಹ ವಿಷಯಗಳು ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಮುನ್ನೆಲೆಗೆ ಬಂದಿದ್ದವು. 1989ರಲ್ಲಿ ಬ್ರೆಜಿಲ್‌ನಲ್ಲಿ ಸರ್ವಾಧಿಕಾರ ಅಂತ್ಯಗೊಂಡು ನೇರ ಚುನಾವಣೆ ಆರಂಭವಾದ ಬಳಿಕ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿ ಎರಡನೇ ಸುತ್ತಿನಲ್ಲಿ ಗೆದ್ದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಲುಲಾ ಪಾತ್ರರಾಗಿದ್ದಾರೆ ಎಂದು 'ಸಿಎನ್‌ಎನ್' ವರದಿ ಮಾಡಿದೆ.
2003 ರಿಂದ 2010 ರವರೆಗೆ ಬ್ರೆಜಿಲ್ ಅನ್ನು ಮುನ್ನಡೆಸಿದ್ದ ಲೂಲಾ, ಬೆಲೆ ಏರಿಕೆ ಮತ್ತು ಭದ್ರತೆಯ ಕಳವಳಗಳ ನಡುವೆ ಈ ಬಾರಿ ಕಠಿಣ ಪೈಪೋಟಿಯನ್ನು ಎದುರಿಸಿದ್ದರು. ಮತ್ತೊಂದೆಡೆ, ಅಪರಾಧಗಳ ವಿರುದ್ಧ ಕಠಿಣ ಕ್ರಮ ಹಾಗೂ ಆಹಾರದ ಬೆಲೆ ಇಳಿಕೆಯ ಭರವಸೆಯನ್ನು ಬೋಲ್ಸನಾರೊ ತಮ್ಮ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದ್ದರು.


