ಢಾಕಾ: ಮಕ್ಕಾದಲ್ಲಿ ತನ್ನ ಇಬ್ಬರು ನಾಗರಿಕರಿಗೆ ಮರಣದಂಡನೆ ವಿಧಿಸಿದ್ದಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಸರ್ಕಾರವು, ಸೌದಿ ಅರೇಬಿಯಾದಿಂದ ವಿವರವಾದ ಮಾಹಿತಿ ಕೋರಿದೆ ಎಂದು ಬಾಂಗ್ಲಾದ 'ಪ್ರಥಮ್ ಆಲೊ' ದಿನಪತ್ರಿಕೆ ವರದಿ ಮಾಡಿದೆ.
ಮರಣದಂಡನೆಗೆ ಗುರಿಯಾದವರ ವಿರುದ್ಧದ ಆರೋಪಗಳು, ನ್ಯಾಯಾಲಯ ನೀಡಿದ ತೀರ್ಪು, ಶಿಕ್ಷೆ ಜಾರಿಗೊಳಿಸಿದ ವಿಧಾನ ಮತ್ತು ಅವರ ಮೃತದೇಹಗಳು ಎಲ್ಲಿವೆ ಎಂಬ ಬಗ್ಗೆ ಮಾಹಿತಿ ಕೋರಿರುವುದಾಗಿ ವರದಿ ತಿಳಿಸಿದೆ.
ಮಕ್ಕಾದಲ್ಲಿ ಮಸೀದಿಯೊಳಗೆ 'ಅಸಭ್ಯ ವರ್ತನೆ' ತೋರಿದ ಆರೋಪದ ಮೇಲೆ ಬಾಂಗ್ಲಾದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಅಕ್ಟೋಬರ್ 14ರಂದು ಮರಣದಂಡನೆಗೆ ಗುರಿಪಡಿಸಲಾಗಿದೆ.
ಜೆದ್ದಾದಲ್ಲಿರುವ ಬಾಂಗ್ಲಾದೇಶ ಕಾನ್ಸುಲ್ ಜನರಲ್, ಅಕ್ಟೋಬರ್ 19ರಂದು ಮಕ್ಕಾದಲ್ಲಿರುವ ಸೌದಿ ವಿದೇಶಾಂಗ ಸಚಿವಾಲಯದ ಕಚೇರಿಗೆ ಆರು ಪ್ರಶ್ನೆಗಳಿಗೆ ಉತ್ತರಗಳನ್ನು ಕೋರಿ ಪತ್ರವನ್ನು ಕಳುಹಿಸಿದ್ದಾರೆ ಎಂದು ವರದಿ ಹೇಳಿದೆ.
ಅಪರಾಧ ಯಾವಾಗ ಮತ್ತು ಎಲ್ಲಿ ನಡೆದಿದೆ? ಶಿರಚ್ಛೇದನದ ಮೂಲಕ ಅಥವಾ ಬೇರೆ ವಿಧಾನದ ಮೂಲಕ ಮರಣದಂಡನೆ ಜಾರಿಗೊಳಿಸಲಾಗಿದೆಯೇ? ಮೃತದೇಹಗಳನ್ನು ಬಾಂಗ್ಲಾದೇಶಕ್ಕೆ ಹಿಂತಿರುಗಿಸಲಾಗುವುದೇ ಅಥವಾ ಈಗಾಗಲೇ ಸೌದಿ ಅರೇಬಿಯಾದಲ್ಲಿ ಸಮಾಧಿ ಮಾಡಲಾಗಿದೆಯೇ? ವಿಚಾರಣೆ ಸಮಯದಲ್ಲಿ ಇಬ್ಬರನ್ನೂ ವಕೀಲರು ಪ್ರತಿನಿಧಿಸಿದ್ದರೇ ಮತ್ತು ಅವರು ಕಾನೂನು ಸಹಾಯವನ್ನು ಕೋರಿದ್ದರೇ? ಎಂಬ ಬಗ್ಗೆಯೂ ಬಾಂಗ್ಲಾದೇಶ ಮಾಹಿತಿ ಕೋರಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.



