ಫ್ರಾನ್ಸ್‌ನಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಕಾರ್ಮಿಕ ಒಕ್ಕೂಟಗಳು, ಜೆನ್-ಝೀಗಳು, ವಿದ್ಯಾರ್ಥಿ ಹಾಗೂ ನಾಗರಿಕ ಸಂಘಟನೆಗಳ ಸದಸ್ಯರು ಬೀದಿಗಿಳಿದಿದ್ದಾರೆ. ಬೆಲೆ ಏರಿಕೆ, ಸಿಬ್ಬಂದಿ ಕೊರತೆ, ಶಿಕ್ಷಣ ವೆಚ್ಚ ಏರಿಕೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ 'ಹಂದಿ ಪಡೆ'ಯ ವಿಡಿಯೊಗಳು ಹರಿದಾಡುತ್ತಿವೆ. ಪ್ರತಿಭಟನಾಕಾರರನ್ನು ತಡೆಯಲು ಸಮವಸ್ತ್ರಧಾರಿ ಭದ್ರತಾ ಸಿಬ್ಬಂದಿ ಹಂದಿಗಳನ್ನು ಹಿಡಿದು ನಿಂತಿದ್ದಾರೆ ಎಂಬಂತೆ ತೋರುವ ವಿಡಿಯೊಗಳನ್ನು ಅಲ್ಲಿನ ಬಲಪಂಥೀಯ ಸಂಘಟನೆಗಳು ಹಾಗೂ ಭಾರತ ಮೂಲದ ಹಲವು ಖಾತೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆದರೆ, ಇದು ನಿಜವಲ್ಲ ಎಂಬುದು ಬಹಿರಂಗವಾಗಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ರಾಜೇಶ್ ಸಿಂಗ್ ಎಂಬವರು, 'ಅದ್ಭುತ! ನಾಳೆ ಪ್ಯಾರಿಸ್‌ನಲ್ಲಿ ನಡೆಯುವ ಪ್ರತಿಭಟನೆಗೆ ಫ್ರಾನ್ಸ್ ಪೊಲೀಸರು ಸಜ್ಜಾಗಿದ್ದಾರೆ. ನಾನು ಶ್ವಾನ ದಳದ ಬಗ್ಗೆ ಕೇಳಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಹಂದಿ ಪಡೆಯನ್ನು ನೋಡುತ್ತಿದ್ದೇನೆ' ಎಂದಿದ್ದಾರೆ.
ಅಕ್ಟೋಬರ್ 23ರಂದು ಹಂಚಿಕೆಯಾಗಿರುವ ಈ ವಿಡಿಯೊ ಇದುವರಗೆ 6.4 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿದೆ. 32 ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿಕೊಂಡಿದ್ದು, 10 ಸಾವಿರ ಮಂದಿ ಮರು ಹಂಚಿಕೆ ಮಾಡಿಕೊಂಡಿದ್ದಾರೆ.

ಇದೇ ರೀತಿಯ ಸಾಕಷ್ಟು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಇವೆ. ಇವುಗಳಿಗೆ ಬಂದಿರುವ ಹೆಚ್ಚಿನ ಕಾಮೆಂಟ್‌ಗಳು ಕೋಮು ವಿಚಾರಕ್ಕೆ ಸಂಬಂಧಿಸಿದವೇ ಆಗಿವೆ.
ಆದರೆ, ಈ ವಿಡಿಯೊ ಅಸಲಿ ಅಲ್ಲ. ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಜಿಸಿರುವುದಾಗಿದೆ ಎಂದು 'ಒಬಿಸಿ' (ಆಫ್ ಬೀಟ್ ಕನ್ಸರ್ನ್ಸ್) ವೆಬ್‌ಸೈಟ್ ತಿಳಿಸಿದೆ.
'ಫ್ರಾನ್ಸ್ ಪ್ರತಿಭಟನೆಯಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿದ್ದಾರೆ. ಅಶಾಂತಿ ಮತ್ತು ಹಿಂಸಾಚಾರಕ್ಕೆ ವಲಸಿಗರೇ ಕಾರಣ ಎಂಬಂತೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿರುವ ಬಲಪಂಥೀಯ ವ್ಯಕ್ತಿಗಳು ಆರೋಪಿಸುತ್ತಿದ್ದಾರೆ' ಎಂಬುದಾಗಿ 'ಫ್ಯಾಕ್ಟ್‌ಚೆಕ್' ವರದಿ ಮಾಡಿದೆ.
'ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಸಂಪೂರ್ಣ ಭಿನ್ನವಾದ ಜಗತ್ತಿನ ವಲಸೆ ಬಂದಿರುವ ಹಾಗೂ ತಮ್ಮ ಹೃದಯದಲ್ಲಿ ದ್ವೇಷವನ್ನೇ ತುಂಬಿಕೊಂಡಿರುವ ಜನರು, ಒಂದು ಕಾಲದಲ್ಲಿ ಶ್ರೇಷ್ಠವಾಗಿದ್ದ ದೇಶವನ್ನು ಛಿದ್ರಗೊಳಿಸಿದ್ದಾರೆ. ತೀರಾ ವಿಳಂಬವಾಗುವ ಮುನ್ನ ನಿಮ್ಮ ಗಡಿಗಳನ್ನು ಮುಚ್ಚಿ. ಪರಿಸ್ಥಿತಿಯನ್ನು ನಿಯಂತ್ರಿಸಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಫ್ರಾನ್ಸ್ ಆಡಳಿತಕ್ಕೆ ಕರೆ ನೀಡಿದ್ದರು ಎಂಬುದನ್ನೂ ಉಲ್ಲೇಖಿಸಿದೆ.
'ಫ್ರಾನ್ಸ್ ಪೊಲೀಸ್ ಇಲಾಖೆಯು ಶ್ವಾನ ಹೊರತುಪಡಿಸಿ ಬೇರಾವುದೇ ಪ್ರಾಣಿಗಳನ್ನು ಭದ್ರತೆಗೆ ಬಳಸುವುದಿಲ್ಲ ಎಂಬುದು ಅಧಿಕೃತ ವೆಬ್‌ಸೈಟ್ ಹಾಗೂ ದಾಖಲೆಗಳಿಂದ ತಿಳಿದುಬಂದಿದೆ' ಎಂದು ವರದಿಯಲ್ಲಿ ಖಚಿತಪಡಿಸಿದೆ.
ಹಾಗೆಯೇ, ಹರಿದಾಡುತ್ತಿರುವ ವಿಡಿಯೊಗಳನ್ನು ಗಮನಿಸಿದರೆ ಸಾಕಷ್ಟು ವ್ಯತ್ಯಾಸಗಳು ಇರುವುದು ಗೊತ್ತಾಗುತ್ತದೆ. ಹೋರಾಟವನ್ನು ಹಿಮ್ಮೆಟ್ಟಿಸಲು ಮುಂದಾಗುವ ಸಿಬ್ಬಂದಿ ಸಾಮಾನ್ಯವಾಗಿ, ಪ್ರತಿಭಟನಾಕಾರರತ್ತ ತಿರುಗಿರುತ್ತಾರೆ. ಆದರೆ, ವಿಡಿಯೊದಲ್ಲಿರುವ ಸಿಬ್ಬಂದಿ ಬೆನ್ನು ತೋರಿಸಿ ನಿಂತಿದ್ದಾರೆ. ಪ್ರತಿಭಟನಾಕಾರರು ಹಿಡಿದಿರುವ ಧ್ವಜ ಫ್ರಾನ್ಸ್‌ನದ್ದಲ್ಲ ಎಂಬುದು ಗಮನಿಸಬೇಕಾದ ಮತ್ತೊಂದು ಮುಖ್ಯವಾದ ಅಂಶ ಎಂಬಿತ್ಯಾದಿ ವಿವರಗಳನ್ನೂ ನೀಡಿದೆ.



