ಛತ್ರಪತಿ ಸಂಬಾಜಿನಗರ: ಬರಪೀಡಿತ ಪ್ರದೇಶಗಳ ರೈತರಿಗೆ ಮಧ್ಯಂತರ ಪರಿಹಾರವಾಗಿ ಅತ್ಯಲ್ಪ ಮೊತ್ತವನ್ನು ಬಿಡುಗಡೆ ಮಾಡುವುದಾಗಿ ಘೊಷಿಸಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಧಾರಾಶಿವ ಜಿಲ್ಲೆಯ ಸೋಯಾಬೀನ್ ಬೆಳೆಗಾರನೊಬ್ಬ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ₹ 5,000 ಮನಿ ಆರ್ಡರ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಬರದಿಂದ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ದೀಪಾವಳಿಗೂ ಮುನ್ನ ₹ 5,000 ಮುಂಗಡ ಪರಿಹಾರ ನೀಡಲಾಗುವುದು. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು ಎಂದು ಫಡಣವೀಸ್ ಇತ್ತೀಚೆಗೆ ಹೇಳಿದ್ದರು.
ಮಹಾರಾಷ್ಟ್ರದ ಶೇ 85ಕ್ಕಿಂತ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಈಗಾಗಲೇ ಘೊಷಿಸಿದೆ. ರಾಜ್ಯದಲ್ಲಿರುವ ಒಟ್ಟು 358 ತಾಲ್ಲೂಕುಗಳ ಪೈಕಿ 305 ಅನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸಲಾಗಿದೆ.
ಬರ ಪರಿಶೀಲನೆ ಕುರಿತ ಪ್ರಕ್ರಿಯೆಗಳನ್ನು ದೀಪಾವಳಿಗೂ ಮೊದಲೇ ಮುಗಿಸಲು ಸಾಧ್ಯವಿಲ್ಲ. ಹಾಗಾಗಿ, ತುರ್ತಾಗಿ ₹ 5,000 ನೆರವು ನೀಡಲು ತೀರ್ಮಾನಿಸಲಾಗಿದೆ ಎಂದು ಫಡಣವೀಸ್ ಹೇಳಿದ್ದರು.
ಇದರಿಂದ ಬೇಸರಗೊಂಡಿರುವ ಧಾರಾಶಿವ ಜಿಲ್ಲೆಯ ಸುರಡಿ ಗ್ರಾಮದ ರೈತ ಚಾಂದ್ ಶೇಕ್, ಮುಖ್ಯಮಂತ್ರಿಗೆ ₹ 5,000 ಮನಿ ಆರ್ಡರ್ ಮಾಡಿರುವುದಾಗಿ ಹೇಳಿದ್ದಾರೆ.
'₹ 25 ಸಾವಿರ ಖರ್ಚು ಮಾಡಿ, ಒಂದೂವರೆ ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆದಿದ್ದೆ. ಕೇವಲ 60 ಕೆ.ಜಿ. ಇಳುವರಿ ಬಂದಿತ್ತು. ಅದರಿಂದ ಬಂದ ₹ 3,900 ಜೊತೆಗೆ, ಸ್ನೇಹಿತನಿಂದ ₹ 1,100 ಸಾಲ ಪಡೆದು ಮನಿ ಆರ್ಡರ್ ಮಾಡಿದ್ದೇನೆ' ಎಂದು ಸುರಡಿ ಅಂಚೆ ಕಚೇರಿ ಎದುರು ಸುದ್ದಿಗಾರರಿಗೆ ತಿಳಿಸಿದ್ದಾರೆ.



