ಚೆನ್ನೈ: 'ಥೇನಿಸೈ ತೆಂಡ್ರಲ್' ಎಂದು ಜನಪ್ರಿಯರಾಗಿದ್ದ ತಮಿಳು ಚಿತ್ರರಂಗದ ಹಿರಿಯ ಸಂಗೀತ ಸಂಯೋಜಕ ಹಾಗೂ ಗಾಯಕ ದೇವಾ (75) ಅವರು ಶನಿವಾರ ಚೆನ್ನೈಯಲ್ಲಿ ನಿಧನರಾದರು.
ಬೆಳಗ್ಗೆ ಸುಮಾರು 8.30ಕ್ಕೆ ಅವರನ್ನು ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
1950 ನವೆಂಬರ್ 20ರಂದು ಜನಿಸಿದ ದೇವಾ ಅವರು ತಮ್ಮ ವಿಶಿಷ್ಟ ಶೈಲಿಯ ಮಧುರ ಗೀತೆಗಳು, ಜಾನಪದ ಆಧಾರಿತ ಸಂಯೋಜನೆಗಳು ಮತ್ತು ಮುಖ್ಯ ವಾಹಿನಿಯ ಸಿನೆಮಾಗಳಲ್ಲಿ 'ಗಾನಾ'ವನ್ನು ಜನಪ್ರಿಯಗೊಳಿಸಿರುವುದಕ್ಕಾಗಿ ತಮಿಳು ಚಿತ್ರರಂಗದ ಶ್ರೇಷ್ಠ ಸಂಗೀತ ನಿರ್ದೇಶಕರದಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ಸುಮಾರು ಮೂರು ದಶಕಗಳ ವೃತ್ತಿಜೀವನದಲ್ಲಿ ಅವರು ತಮಿಳು, ಕನ್ನಡ, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದ 400ಕ್ಕೂ ಅಧಿಕ ಚಲನಚಿತ್ರಗಳಿಗೆ ಹಾಡುಗಳು ಮತ್ತು ಸಂಗೀತ ಸಂಯೋಜಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ಟೈಟಲ್ ಕಾರ್ಡ್ಗಾಗಿ ಪ್ರಸಿದ್ಧ ಥೀಮ್ ಅನ್ನು ಕೂಡ ಅವರು ಸಂಯೋಜಿಸಿದ್ದರು.
ದೇವ ಅವರು 1980ರ ದಶಕದ ಉತ್ತರಾರ್ಧದಲ್ಲಿ ಮತ್ತು 1990ರ ದಶಕದ ಆರಂಭದಲ್ಲಿ ತಮಿಳು ಚಿತ್ರರಂಗದಲ್ಲಿ ಅಪಾರ ಪ್ರಸಿದ್ಧಿ ಪಡೆದರು. ಪ್ರಮುಖ ನಿರ್ದೇಶಕರು ಮತ್ತು ನಟರೊಂದಿಗಿನ ಅವರ ಸಹಯೋಗವು ನೆನಪಿನಲ್ಲಿ ಉಳಿಯುವ ಅನೇಕ ಗೀತೆಗಳನ್ನು ನೀಡಿತು. ಅವರು ಸಂಗೀತ ಸಂಯೋಜಿಸಿದ ಪ್ರಮುಖ ಚಿತ್ರಗಳಲ್ಲಿ ಅಣ್ಣಾಮಲೈ, ಬಾಷಾ, ಆಶೈ, ಕಾದಲ್ ಕೋಟೈ, ವಾಲಿ, ನೇರುಕ್ಕು ನೇರ್ ಮತ್ತು ಖುಷಿ ಮುಂತಾದ ಚಲನಚಿತ್ರಗಳಿಗೆ ಸೇರಿವೆ.
ಚೆನ್ನೈಯ ಸಾಂಪ್ರದಾಯಿಕ ಗಾನಾ ಸಂಗೀತದ ನಾದ ಮತ್ತು ಲಯಗಳನ್ನು ತಮಿಳು ಸಿನೆಮಾದ ಮುಖ್ಯವಾಹಿನಿಗೆ ತಂದ ಹೆಗ್ಗಳಿಕೆ ದೇವಾ ಅವರಿಗೆ ಸಲ್ಲುತ್ತದೆ. ಅವರ ಉತ್ಸಾಹಭರಿತ, ಜನಪದ ಪ್ರಭಾವಿತ ಹಾಡುಗಳು ಅವರ ಶೈಲಿಯ ಗುರುತಾಗಿದೆ. ಇದರ ಜೊತೆಗೆ ಭಾವಪೂರ್ಣ ಪ್ರೇಮಗೀತೆಗಳು ಭಕ್ತಿಗೀತೆಗಳನ್ನು ಸಂಯೋಜಿಸುವ ಮೂಲಕ ಅವರು ವೈವಿಧ್ಯತೆ ಪ್ರದರ್ಶಿಸಿದ್ದರು.
ಅವರು 'ಅಮೃತವರ್ಷಿಣಿ', 'ಕೋಟಿಗೊಬ್ಬ', 'ಸಿಂಹಾದ್ರಿಯ ಸಿಂಹ', 'ವಿಷ್ಣು ಸೇನಾ', 'ನಾನು ನಾನೇ' ಮೊದಲಾದ ಕನ್ನಡ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದರು.
ಅವರ ಕೊಡುಗೆಗಳಿಗಾಗಿ ತಮಿಳುನಾಡು ಸರಕಾರದ 'ಕಲೈಮಾಮಣಿ' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಆಸೈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅವರು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.



