ಭದೋಹಿ: ಬುಡಕಟ್ಟು ಸಮುದಾಯದ ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ ಎಂಬ ಪ್ರಕರಣದಲ್ಲಿ ನಾಲ್ವರು ವೈದ್ಯರು ಹಾಗೂ ನರ್ಸ್ ಗಂಭೀರ ಕರ್ತವ್ಯ ಲೋಪವೆಸಗಿರುವುದು ಸಾಬೀತಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ತಾವು ಮುಷಹರ್ ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂಬುದುನ್ನು ತಿಳಿದ ವೈದ್ಯರು ಹಾಗೂ ಸ್ಟಾಫ್ ನರ್ಸ್, ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದರು ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ಶೈಲೇಶ್ ಕುಮಾರ್ ನಿರ್ದೇಶನದಂತೆ ಪ್ರಕರಣದ ತನಿಖೆಗೆ ರಚಿಸಿದ್ದ ಮೂವರು ಸದಸ್ಯರ ತಂಡವು ವರದಿ ಸಲ್ಲಿಸಿದೆ ಎಂದು ಮುಖ್ಯ ಆರೋಗ್ಯ ಅಧಿಕಾರಿ (ಸಿಎಂಒ) ಸಂತೋಷ್ ಕುಮಾರ್ ಛಾಕ್ ತಿಳಿಸಿದ್ದಾರೆ.
20 ವರ್ಷ ರಾಣಿ ವನವಾಸಿ ಎಂಬವರನ್ನು ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಗೆ ಸೋಮವಾರ ಕರೆದುಕೊಂಡು ಹೋಗಲಾಗಿತ್ತು. ಆದರೆ, ರಾಣಿ ಅವರಿಗೆ ರಕ್ತಹೀನತೆ ಇದ್ದು, ರಕ್ತದ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲಿಸಿಕೊಂಡಿರಲಿಲ್ಲ. ಆಕೆಯ ಸಹೋದರ ರಕ್ತ ನೀಡಲು ಸಿದ್ಧವಿದ್ದರೂ ಸೂಕ್ತ ಕ್ರಮ ಕೈಗೊಂಡಿಲಿಲ್ಲ ಎಂದು ಸಿಎಂಒ ಹೇಳಿದ್ದಾರೆ.
ರಾಣಿ ಅವರು ತಮ್ಮೊಂದಿಗೆ ಬಂದಿದ್ದ ಮಹಿಳೆಯ ಸಹಾಯದಿಂದ, ರಸ್ತೆ ಬದಿಯಲ್ಲಿಯೇ ಮಂಗಳವಾರ ರಾತ್ರಿ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣ ವರದಿಯಾದಾಗ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ. ಅಜಯ್ ಕುಮಾರ್ ತಿವಾರಿ ಮತ್ತು ಸ್ತ್ರೀರೋಗ ತಜ್ಞ ಡಾ. ನೀಲಿಮಾ ಧವನ್ ಅವರ ವಿರುದ್ಧ ಕ್ರಮಕ್ಕೆ ತನಿಖಾ ತಂಡ ಶಿಫಾರಸು ಮಾಡಿದೆ. ಅದರಂತೆ, ಧವನ್ ಅವರ ವೇತನ ತಡೆಹಿಡಿಯಲಾಗಿದ್ದು, ಪಂಕಜ್ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ. ನರ್ಸ್ ನೀಲಮ್ ಮೌರ್ಯ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಿಎಂಒ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯ ಹೆರಿಗೆ ಕೋಣೆಗೆ ಬೀಗ ಜಡಿದಿರುವುದು ತನಿಖೆ ವೇಳೆ ಕಂಡುಬಂದಿದೆ. ಸಿಎಂಎಸ್ ಮತ್ತು ಇತರರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸುವ ಬದಲು, ದೂರವಾಣಿ ಮೂಲಕವೇ ಮಾತನಾಡಿ ಸುಮ್ಮನಾಗಿದ್ದರು ಎಂಬುದೂ ಗೊತ್ತಾಗಿದೆ.
ರಾಣಿ ವನವಾಸಿ ಅವರು ರಸ್ತೆ ಬದಿಯ ಕಾಂಪೌಂಡ್ ಬಳಿ ಮಲಗಿರುವುದು, ಅವರ ಸಹೋದರ ಹಾಗೂ ಮತ್ತೊಬ್ಬ ಮಹಿಳೆ ಬೆಡ್‌ಶೀಟ್ ಹಿಡಿದು ಮರೆ ಮಾಡಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

