ಕಾಸರಗೋಡು: ವಿದ್ಯುತ್ ಇಲಾಖೆಯ ನೌಕರನೆಂದು ಸೋಗು ಹಾಕಿಕೊಂಡು ಮನೆಗೆ ಬಂದ ಯುವಕನೊಬ್ಬ ಗೃಹಿಣಿಯ ಕತ್ತಿನಲ್ಲಿದ್ದ ಐದು ಪವನ್ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳತ್ತೂರಿನಲ್ಲಿ ನಡೆದಿದೆ.
ಕೊಳತ್ತೂರು ಅರಮಣಪಾಡಿ ಬಾವಿಕ್ಕರಯಡ್ಕದ ಅರಿಯಿಲ್ ಹೌಸ್‌ನ ಬಿ.ಕೆ. ಕೃಷ್ಣನ್ ನಾಯರ್ ಅವರ ಪತ್ನಿ ಕೆ. ಶುಭಾ ನೀಡಿದ ದೂರಿನ ಆಧಾರದಲ್ಲಿ ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮನೆಯ ಹಿಂಭಾಗದಿಂದ ಪ್ಯಾಂಟ್ ಮತ್ತು ಟಿ-ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಆಗಮಿಸಿದ್ದಾನೆ. ತಾನು ವಿದ್ಯುತ್ ಇಲಾಖೆಯ ನೌಕರನೆಂದು ಪರಿಚಯಿಸಿಕೊಂಡ ಆತ, ಮನೆಯ ಸಮೀಪದ ಬಾವಿಯ ಬಳಿ ತೆರಳಿ ವಿದ್ಯುತ್ ತಂತಿಗಳನ್ನು ಪರಿಶೀಲಿಸಿದ್ದಾನೆ.
ಈ ವೇಳೆ ಅಲ್ಲಿಗೆ ಬಂದ ಶುಭಾ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಳ್ಳಲು ಆರೋಪಿ ಯತ್ನಿಸಿದ್ದಾನೆ. ಶುಭಾ ಪ್ರತಿರೋಧ ವ್ಯಕ್ತಪಡಿಸಿ ಸರವನ್ನು ಬಿಗಿಯಾಗಿ ಹಿಡಿದುಕೊಂಡರೂ, ಸರ ತುಂಡಾಗಿ ಸುಮಾರು ನಾಲ್ಕು ಪವನ್ ಚಿನ್ನ ಆರೋಪಿಯ ಕೈ ಸೇರಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಶುಭಾ ಅವರ ಕೂಗಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ವಿವಿಧೆಡೆ ಹುಡುಕಾಟ ನಡೆಸಿದರೂ ಆರೋಪಿಯ ಪತ್ತೆಯಾಗಿಲ್ಲ.
ಘಟನೆಯ ಕುರಿತು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

