ಕಾಸರಗೋಡು: ಅನಿವಾಸಿ ಉದ್ಯಮಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಯೂಟ್ಯೂಬರ್ ಖಾದರ್ ಕರಿಪ್ಪೊಡಿ, ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಕಾಸರಗೋಡು ನಗರ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.
ನಿರೀಕ್ಷಣಾ ಜಾಮೀನು ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಹಾಗೂ ಕೇರಳ ಹೈಕೋರ್ಟ್ ತಿರಸ್ಕರಿಸಿದ್ದವು. ಬಳಿಕ ಖಾದರ್ ಕರಿಪ್ಪೊಡಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಇದೀಗ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಆತ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಳ್ಳಿಕ್ಕರೆ ನಿವಾಸಿ, ಅನಿವಾಸಿ ಉದ್ಯಮಿ ಅಬ್ದುಲ್ ಅಹದ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾದರ್ ಕರಿಪ್ಪೊಡಿ, ರಾಶಿದ್ ಅಲಿಯಾಸ್ ಸಾಕಿ ಹಾಗೂ ಅಶ್ರಫ್ ವಿರುದ್ಧ ಕಾಸರಗೋಡು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ವಿದೇಶದಲ್ಲಿನ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷವೇ ಹಲ್ಲೆ ಹಾಗೂ ಕೊಲೆ ಯತ್ನಕ್ಕೆ ಕಾರಣ ಎನ್ನಲಾಗಿದೆ.
ಆರೋಪಿ ಖಾದರ್ ಕರಿಪ್ಪೊಡಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಹತ್ತಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

