ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು 'ವೆಟ್ರಿ ಪಯಣಂ' ಯೋಜನೆಯಡಿ ವಿಕಲಚೇತನರು ಮತ್ತು ಅವರೊಂದಿಗೆ ಪ್ರಯಾಣಿಸುವ ಸಹಾಯಕರೊಬ್ಬರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.
ಅರ್ಹ ಫಲಾನುಭವಿಗಳು ರಾಜ್ಯ ಸರ್ಕಾರ ನೀಡುವ 16 ಅಂಕಿಯ 'ವಿಶಿಷ್ಟ ವಿಕಲಚೇತನ ಗುರುತಿನ ಚೀಟಿ'ಯನ್ನು (ಯುಡಿಐಡಿ ಕಾರ್ಡ್) ಬಳಸಿಕೊಂಡು ಪ್ರಯಾಣ ದರದಲ್ಲಿ ಶೇಕಡ 100ರಷ್ಟು ವಿನಾಯಿತಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಷ್ಕೃತ ಮಾರ್ಗಸೂಚಿ ಪ್ರಕಾರ ನಗರ, ಗ್ರಾಮೀಣ, ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವ ಸಾಮಾನ್ಯ, ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಅನ್ವಯಿಸುತ್ತದೆ. ಆದರೆ, ಹವಾನಿಯಂತ್ರಿತ (ಎಸಿ) ಬಸ್‌ಗಳಿಗೆ ಇದು ಅನ್ವಯಿಸುವುದಿಲ್ಲ.
ಸ್ವತಂತ್ರವಾಗಿ ಪ್ರಯಾಣಿಸಲು ಸಾಧ್ಯವಾಗದ ವಿಕಲಚೇತನರು ತಮ್ಮೊಂದಿಗೆ ಒಬ್ಬ ಸಹಾಯಕನನ್ನು ಕರೆದುಕೊಂಡು ಪ್ರಯಾಣಿಸಲು ಅನುಮತಿ ನೀಡಲಾಗಿದೆ. ವಿಕಲಚೇತನರ ಯುಡಿಐಡಿ ಕಾರ್ಡ್ ಅನ್ನು ಪರಿಶೀಲಿಸಿದ ಬಳಿಕ ಬಸ್ ಕಂಡಕ್ಟರ್ ಶೂನ್ಯ ಮೊತ್ತದ ಟಿಕೆಟ್ ನೀಡುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸ ಯುಡಿಐಡಿ ಆಧಾರಿತ ವ್ಯವಸ್ಥೆಯ ಜಾರಿಯೊಂದಿಗೆ ಈ ಹಿಂದೆ 2026-27ನೇ ಹಣಕಾಸು ವರ್ಷಕ್ಕಾಗಿ ನೀಡಲಾಗಿದ್ದ ಉಚಿತ ಬಸ್ ಪಾಸ್‌ಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರವು ಈ ಹಿಂದೆ 2026-27ನೇ ಸಾಲಿನ ಬಜೆಟ್‌ನಲ್ಲಿ ಬಸ್ ಪ್ರಯಾಣ ರಿಯಾಯಿತಿಗಾಗಿ ₹95 ಕೋಟಿ ಮೀಸಲಿಟ್ಟಿತ್ತು. ಇದೀಗ ಯೋಜನೆಯ ವಿಸ್ತರಣೆಗಾಗಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದು, ಒಟ್ಟು ಮೀಸಲಿಟ್ಟ ಮೊತ್ತವು ₹114 ಕೋಟಿಗೆ ಏರಿಕೆಯಾಗಿದೆ.
ಈ ಹಿಂದೆ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್‌ಗಳನ್ನು ನೀಡಲಾಗುತ್ತಿತ್ತು. ಪಾಸ್ ಬಳಸಿ ಶಿಕ್ಷಣ, ಉದ್ಯೋಗ, ಸ್ವಯಂ ಉದ್ಯೋಗ, ಪುನರ್ವಸತಿ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿತ್ತು.



