HEALTH TIPS

ಉ.ಪ್ರದೇಶ| ಒಂದು ಮನೆ, ಇಬ್ಬರು ಸಹೋದರರು, 3 ಡ್ರಮ್‌ಗಳು: ಕಂತೆ ಕಂತೆ ನೋಟು ಜಪ್ತಿ!

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ಕೇವಲ 45 ಕಿಲೋಮೀಟರ್ ದೂರದಲ್ಲಿರುವ ಗ್ರಾಮವೊಂದರ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ. 


ಮನೆಯ ನೆಲದಡಿಯಲ್ಲಿ ಮೂರು ಡ್ರಮ್‌ಗಳಲ್ಲಿ ಹೂತಿಡಲಾಗಿದ್ದ ಅಪಾರ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ಪ್ರಯಾಗ್‌ರಾಜ್ ಪೊಲೀಸ್ ಕಮಿಷನರೇಟ್‌ನ ಗಂಗಾನಗರ ವಲಯದ ಪೊಲೀಸರು ಯಾದವ್ ಎಂಬುವವರ ಕುಟುಂಬಕ್ಕೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ 'ಎನ್‌ಡಿಟಿವಿ' ವರದಿ ಮಾಡಿದೆ.

ಬುಧವಾರ, ಸೋರಾನ್ ಮತ್ತು ಫುಲ್‌ಪುರ ಎಸಿಪಿಗಳ ನೇತೃತ್ವದಲ್ಲಿ ನವಾಬ್‌ಗಂಜ್ ಮತ್ತು ಸೋರಾನ್ ಪೊಲೀಸ್ ಠಾಣೆಗಳ ಜಂಟಿ ತಂಡವು ಗಂಗಾನಗರ ವಲಯದ ಬಾರೈಪುರಕ್ಕೆ ತೆರಳಿತ್ತು.

ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಮನೆ ಹಿಂದೆ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಯಾದವ್ ಮತ್ತು ರಾಜೇಶ್ ಯಾದವ್ ಎಂಬುವರಿಗೆ ಸೇರಿದ್ದಾಗಿದೆ. 2020ರ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ, ಈ ಸಹೋದರರು ಹಠಾತ್ತನೆ ತಮ್ಮ ಕೆಲಸ ಬಿಟ್ಟು ಗ್ರಾಮಕ್ಕೆ ಮರಳಿದ್ದರು. ಅಂದಿನಿಂದ ಅವರ ಆರ್ಥಿಕ ಸ್ಥಿತಿ ಮತ್ತು ಜೀವನಶೈಲಿಯಲ್ಲಿ ಆದ ಭಾರಿ ಬದಲಾವಣೆಯನ್ನು ಸ್ಥಳೀಯರು ಗಮನಿಸಿದ್ದರು.

ಸಾಧಾರಣ ಕುಟುಂಬಕ್ಕೆ ಸೇರಿದ ರಾಕೇಶ್ ಮತ್ತು ರಾಜೇಶ್, ತೀರಾ ಕಡಿಮೆ ಅವಧಿಯಲ್ಲೇ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಕರೆಗಟ್ಟಲೆ ಜಮೀನು ಮತ್ತು ಟ್ರ್ಯಾಕ್ಟರ್ ಖರೀದಿಸಿದರು. ಅಲ್ಲದೇ ಹಣವನ್ನು ನೀರಿನಂತೆ ಖರ್ಚು ಮಾಡಲು ಶುರು ಮಾಡಿದ್ದರು.

ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಇವರು ಇಷ್ಟೊಂದು ಶ್ರೀಮಂತರಾಗಿದ್ದು ಹೇಗೆ ಎಂದು ಊರಿನ ಜನ ಆಶ್ಚರ್ಯಚಕಿತರಾಗಿದ್ದರು. ಆದರೆ ಇವರ ಸಂಪತ್ತಿನ ಮೂಲದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.

ಇತ್ತೀಚೆಗೆ ಈ ಸಹೋದರರು ಮತ್ತು ಗ್ರಾಮಸ್ಥರ ನಡುವೆ ಜಗಳ ನಡೆದಾಗ, ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿ 'ಅವರ ಬಳಿ ಭಾರಿ ಪ್ರಮಾಣದ ಕಪ್ಪು ಹಣವಿದೆ' ಎಂದು ದೂರು ನೀಡಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು, ಹಿರಿಯ ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದಾರೆ.

ಮನೆಯ ಆರಂಭಿಕ ಶೋಧದ ವೇಳೆ ಏನೂ ಸಿಕ್ಕಿರಲಿಲ್ಲ. ಬಳಿಕ ಖಚಿತ ಸುಳಿವು ಆಧರಿಸಿ, ಕೋಣೆಯೊಂದರ ನೆಲವನ್ನು ಪರಿಶೀಲಿಸಿದಾಗ ಅಲ್ಲಿನ ಮಣ್ಣನ್ನು ಇತ್ತೀಚೆಗೆ ಅಗೆದಿರುವುದು ಕಂಡುಬಂದಿದೆ. ಕೂಡಲೇ ಕಾರ್ಮಿಕರನ್ನು ಕರೆಸಿ ಅಗೆಸಿದಾಗ, ನೆಲದಡಿಯಲ್ಲಿ ಹೂತಿಟ್ಟಿದ್ದ 3 ಡ್ರಮ್‌ಗಳು ಪತ್ತೆಯಾದವು.

ದಪ್ಪಗಿನ ಕಪ್ಪು ಪ್ಲಾಸ್ಟಿಕ್‌ನಿಂದ ಸುತ್ತಿಡಲಾಗಿದ್ದ ಆ ಡ್ರಮ್‌ಗಳನ್ನು ತೆರೆದಾಗ ಪೊಲೀಸರೇ ದಂಗಾಗಿದ್ದಾರೆ. ಡ್ರಮ್‌ಗಳಲ್ಲಿ ₹500 ಮುಖಬೆಲೆಯ ನೋಟುಗಳ ಕಟ್ಟುಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ ಕೋಟ್ಯಂತರ ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.

ಭಾರಿ ಪ್ರಮಾಣದ ಹಣ ಸಿಕ್ಕಿದ್ದು, ಎಣಿಕೆ ಪ್ರಕ್ರಿಯೆ ಮುಗಿದ ಮೇಲಷ್ಟೇ ನಿಖರ ಮೊತ್ತ ತಿಳಿಯಲಿದೆ ಎಂದು ಗಂಗಾನಗರ ಡಿಸಿಪಿ ಸೋನಮ್ ಕುಮಾರ್ ತಿಳಿಸಿದ್ದಾರೆ.

ತಕ್ಷಣವೇ ಸ್ಥಳಕ್ಕಾಗಮಿಸಿದ ಹಿರಿಯ ಅಧಿಕಾರಿಗಳು ಮನೆಯನ್ನು ಸೀಲ್ ಮಾಡಿದ್ದು, ಕುಟುಂಬದ ಓರ್ವ ಸದಸ್ಯನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಹಣದ ಮೂಲವನ್ನು ಪತ್ತೆಹಚ್ಚಲು ಯತ್ನಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಇತರ ಆರ್ಥಿಕ ತನಿಖಾ ಸಂಸ್ಥೆಗಳಿಗೆ ಈ ಕುರಿತು ಅಧಿಕೃತವಾಗಿ ತಿಳಿಸಲಾಗಿದ್ದು, ಅವರು ಬಂದ ನಂತರ ನೋಟು ಎಣಿಕೆ ಕಾರ್ಯ ಆರಂಭವಾಗಲಿದೆ ಎಂದೂ ಅವರು ತಿಳಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries