ಕಾಸರಗೋಡು: ದಸರಾ ಹಬ್ಬದ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಸಿಬ್ಬಂದಿ ಮಂಡಳಿ (ಸ್ಟಾಫ್ ಕೌನ್ಸಿಲ್) ಮತ್ತು ‘ಕನ್ನಡ ಬಳಗ’ದ ಜಂಟಿ ಆಶ್ರಯದಲ್ಲಿ ‘ನಾಡಹಬ್ಬ’ ಶೀರ್ಷಿಕೆಯಡಿ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಯಿತು.
ಆಸ್ಪತ್ರೆಯ ಆವರಣದಲ್ಲಿ ನಡೆದ ಸಮಾರಂಭವನ್ನು ಜನರಲ್ ಆಸ್ಪತ್ರೆಯ ಅಧೀಕ್ಷಕ ಡಾ. ಜಿತೇಶ್ ಉದ್ಘಾಟಿಸಿದರು. ಲೇ ಸೆಕ್ರೆಟರಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಹಿರಿಯ ವೈದ್ಯ ಡಾ. ಜನಾರ್ದನ ನಾಯ್ಕ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಆರ್ಎಂಒ ಡಾ. ಸಂಧ್ಯಾ, ಸಿಬ್ಬಂದಿ ಮಂಡಳಿ ಅಧ್ಯಕ್ಷ ಡಾ. ಅರುಣ್ ರಾಮ್, ನರ್ಸಿಂಗ್ ಸೂಪರಿಂಟೆಂಡೆಂಟ್ ನಿರ್ಮಲಾ ಅಗಸ್ಟಿನ್, ಜೆಪಿಎಚ್ಎನ್ ಶಾಲೆಯ ಪ್ರಾಂಶುಪಾಲೆ ಗೀತಾ ಕುಮಾರಿ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಬಿ. ನಾರಾಯಣ ಸ್ವಾಗತಿಸಿದರು. ಕಿಶೋರ್ ಕುಮಾರ್ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳು ಹಾಗೂ ಪರಂಪರೆಯ ವಸ್ತುಗಳನ್ನು ಒಳಗೊಂಡ ವಿಶೇಷ ಪ್ರದರ್ಶನವೂ ಆಯೋಜಿಸಲಾಗಿತ್ತು. ದಸರಾ ಹಬ್ಬದ ಸಂಭ್ರಮದೊಂದಿಗೆ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ವೇದಿಕೆಯಾಗಿ ‘ನಾಡಹಬ್ಬ’ ಗಮನ ಸೆಳೆಯಿತು.

