ಮುಂಬೈ: 'ಫ್ಲೈದುಬೈ' ಸಂಸ್ಥೆಯ ವಿಮಾನ ಪತನಗೊಳ್ಳುವುದನ್ನು ತಪ್ಪಿಸಿ 174 ಪ್ರಯಾಣಿಕರ ಪ್ರಾಣ ಉಳಿಸಿದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಸಾಧನೆಯನ್ನು ಮೆಚ್ಚಿರುವ ಯುಎಇ, ಎರಡನೇ ಅತ್ಯುನ್ನತ ನಾಗರಿಕ ಗೌರವ 'ಆರ್ಡರ್ ಆಫ್ ಜಾಯೆದ್-II' ನೀಡಿ ಗೌರವಿಸಿದೆ.
ಯುಎಇಯ ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಸೆಪ್ಟೆಂಬರ್ 30ರಂದು ಪ್ರಯಾಣ ಆರಂಭಿಸಿದ್ದ 'ಬೋಯಿಂಗ್ 737' ವಿಮಾನವನ್ನು ಹೈಜಾಕ್ ಮಾಡಲು ಮುಂದಾಗಿದ್ದ ಸಹ-ಪೈಲಟ್, ವಿಮಾನವನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದ.
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಚಾಕುವಿನಿಂದ ಇರಿದು, ವಿಮಾನ ಪತನಗೊಳಿಸಲು ಮುಂದಾಗಿದ್ದ. ಆದರೆ, ಆತನೊಂದಿಗೆ ಸಂಘರ್ಷ ನಡೆಸಿದ ಮಚ್ಚರ್, ಸಿಬ್ಬಂದಿ ಹಾಗೂ ಪ್ರಯಾಣಿಕರ ನೆರವಿನಿಂದ ಮಾರ್ಗ ಬದಲಾವಣೆ ಮಾಡಿ, ಸೌದಿ ಅರೇಬಿಯಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದರು.
ಇದರಿಂದಾಗಿ ನೂರಾರು ಜನರ ಪ್ರಾಣ ಉಳಿದಿತ್ತು. ಮಚ್ಚರ್ ಸಾಹಸಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ರಾಷ್ಟ್ರಗಳು, ಮಚ್ಚರ್ ಸಾಧನೆಯನ್ನು ಗೌರವಿಸಿವೆ. ಇದೀಗ ಯುಎಇಯಿಂದ ಪುರಸ್ಕಾರ ದೊರೆತಿದೆ.
ಅಧ್ಯಕ್ಷೀಯ ಸ್ವಾಗತ ಸಮಾರಂಭದಲ್ಲಿ ಮಚ್ಚರ್ ಹಾಗೂ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗೆ ಪುರಸ್ಕಾರ ನೀಡಲಾಗಿದೆ.
ಯುವರಾಜ, ಯುಎಇ ಉಪ ಪ್ರಧಾನಿಯೂ ಆಗಿರುವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಸ್ಮಿತ್ ಮಚ್ಚರ್‌ಗೆ ಪದಕ ಪ್ರದಾನ ಮಾಡಿದ್ದಾರೆ. ವಿಮಾನ ಸಿಬ್ಬಂದಿಯ ಕರ್ತವ್ಯಪ್ರಜ್ಞೆಯನ್ನೂ ಶ್ಲಾಘಿಸಿದ್ದಾರೆ.



