ರೈತರು, ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿದ್ದ ಹಂದಿ ಹತೆ; ‘ಮಿಷನ್ ವೈಲ್ಡ್ ಪಿಗ್’ ಕಾರ್ಯಾಚರಣೆ ಯಶಸ್ವಿ
ಮುಳಿಯಾರ್ ಪನ್ನಡ್ಕ ನೀರಳತ್ತಂಡಿ ಪ್ರದೇಶದಲ್ಲಿ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ ವಿಶೇಷ ತಂಡ ಕಾಡುಹಂದಿಯನ್ನು ಗುಂಡಿಕ್ಕಿ ಕೊಂದಿದೆ.
ಈ ಪ್ರದೇಶದಲ್ಲಿ ಕಾಡುಹಂದಿಗಳ ಉಪಟಳ ತೀವ್ರಗೊಂಡಿದ್ದು, ರೈತರು ಹಾಗೂ ದ್ವಿಚಕ್ರ ವಾಹನ ಸವಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಗಿತ್ತು.
ಆರ್ಆರ್ಟಿ (ಕ್ಷಿಪ್ರ ಪ್ರತಿಕ್ರಿಯಾ ತಂಡ) ಹಾಗೂ ವನ್ಯಜೀವಿ ನಿರ್ವಹಣಾ ತಂಡದ ಸಹಕಾರದೊಂದಿಗೆ ಪಂಚಾಯತ್ ಅಧ್ಯಕ್ಷ ಕೆ.ಬಿ. ಮೊಹಮ್ಮದ್ ಕುಂಞಿ ಅವರ ನಿರ್ದೇಶನದಂತೆ ‘ಮಿಷನ್ ವೈಲ್ಡ್ ಪಿಗ್’ ಕಾರ್ಯಾಚರಣೆ ನಡೆಸಲಾಯಿತು.
ಶುಕ್ರವಾರ ಮುಂಜಾನೆ ಕಾಡುಹಂದಿಯನ್ನು ಪತ್ತೆಹಚ್ಚಿದ ಶೂಟರ್ ಬಿ. ಅಬ್ದುಲ್ ಗಫೂರ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ಗುಂಡಿಕ್ಕಿ ಕೊಂದಿದೆ. ಬಳಿಕ ಹತ್ಯೆಯಾದ ಕಾಡುಹಂದಿಯ ಕಳೇಬರವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು.
ರೇಂಜ್ ಫಾರೆಸ್ಟ್ ಅಧಿಕಾರಿ ಸಿ.ವಿ. ವಿನೋದ್ ಕುಮಾರ್, ಆರ್ಆರ್ಟಿ ಡೆಪ್ಯುಟಿ ರೇಂಜ್ ಫಾರೆಸ್ಟ್ ಅಧಿಕಾರಿ ಮಧುಸೂದನನ್, ಕಾರಡ್ಕ ವಿಭಾಗದ ಫಾರೆಸ್ಟರ್ ಕೆ.ಎ. ಬಾಬು, ಆರ್ಆರ್ಟಿ ಅಧಿಕಾರಿ ಬಾಬು ಪಾಣತ್ತೂರು, ಮಸೂದ್ ಬೋವಿಕ್ಕಾನ, ಅಬ್ದುಲ್ಲಕುಂಞಿ, ಬೀಟ್ ಫಾರೆಸ್ಟ್ ಅಧಿಕಾರಿಗಳು ಹಾಗೂ ಆರ್ಆರ್ಟಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದ್ದರು.



