ನವದೆಹಲಿ: ಚುನಾವಣಾ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಲು ಅಣಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ದೆಹಲಿ ಪೊಲೀಸರು ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಿದ್ದಾರೆ.
ನವೆಂಬರ್ 1ರಂದು ದೆಹಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ರ್ಯಾಲಿ ನಡೆಸಲು ಕಾಂಗ್ರೆಸ್ಗೆ ಅನುಮತಿ ಸಿಕ್ಕಿದೆ.
ಇತ್ತೀಚೆಗಷ್ಟೇ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ದೆಹಲಿ ಪೊಲೀಸರು ತೆಗೆದುಹಾಕಿದ್ದರು. ಅದರ ಬದಲಿಗೆ ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನಗಳನ್ನು ಹೊಸ ಪ್ರತಿಭಟನಾ ಸ್ಥಳಗಳಾಗಿ ನಿಗದಿಪಡಿಸಲಾಗಿದೆ.
ಕಾಂಗ್ರೆಸ್ ಪಕ್ಷವು ಮೊದಲಿಗೆ ದೆಹಲಿ ಪಾಲಿಕೆಯನ್ನು ಸಂಪರ್ಕಿಸಿ ಸ್ಥಳದ ಲಭ್ಯತೆ ಕುರಿತು ಮಾಹಿತಿ ಪಡೆದುಕೊಂಡಿತ್ತು. ಅಕ್ಟೋಬರ್ 25 ರಿಂದ ನವೆಂಬರ್ 3ರವರೆಗೆ ಮೈದಾನ ಖಾಲಿ ಇದೆ ಎಂದು ಎಂಸಿಡಿ ದೃಢಪಡಿಸಿತ್ತು.
ಎಂಸಿಡಿ ನೀಡಿದ ಪ್ರಮಾಣಪತ್ರದ ಆಧಾರದ ಮೇಲೆ ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ದೆಹಲಿ ಪೊಲೀಸರು ಅಧಿಕೃತವಾಗಿ ಎನ್ಒಸಿ ನೀಡಿದ್ದಾರೆ ಎಂದು ಸೆಂಟ್ರಲ್ ದೆಹಲಿ ಡಿಸಿಪಿ ರೋಹಿತ್ ರಾಜ್ಭರ್ ತಿಳಿಸಿದ್ದಾರೆ.
ಇತ್ತೀಚೆಗೆ ಜಂತರ್ ಮಂತರ್ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನೇತೃತ್ವದಲ್ಲಿ ನಡೆದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಿಜಿಪಿ ನಾಯಕರನ್ನು ಬಂಧಿಸಿದ್ದರು.
ಅಲ್ಲದೆ, ಜಂತರ್ ಮಂತರ್ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ ಸಿಜಿಪಿ ಮುಖ್ಯಸ್ಥ ಹಾಗೂ ಇತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಎಲ್ಲಾ ಗಲಾಟೆ ಮತ್ತು ಸಾರ್ವಜನಿಕ ಭದ್ರತೆಯ ಹಿತದೃಷ್ಟಿಯಿಂದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವುದನ್ನು ದೆಹಲಿ ಪೊಲೀಸರು ನಿಷೇಧಿಸಿದ್ದಾರೆ.



