ನವದೆಹಲಿ: ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಮುಂಬೈ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಬಾಲಿವುಡ್ ನಟ, ಅಮೆರಿಕದ ಪ್ರಜೆ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಕೀಲ ಜುಲ್ಫಿಕರ್ ಮೆಮನ್ ಮತ್ತು 'ಎಂಝಡ್ಎಂ' ಲೀಗಲ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ 43 ವರ್ಷದ ನಟ, ತಮಗೆ ಬಂದ ನೋಟಿಸ್ ಅನ್ನು 'ಕಾನೂನುಬಾಹಿರ, ವಿಕೃತ, ಕಠೋರ ಮತ್ತು ಕಾನೂನು ದೃಷ್ಟಿಯಿಂದ ದೋಷಪೂರಿತ' ಎಂದು ಬಣ್ಣಿಸಿದ್ದಾರೆ. ಜೊತೆಗೆ ಈ ನೋಟಿಸ್ ಅನ್ನು ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
ಚಾಲ್ತಿಯಲ್ಲಿರುವ ಕಾನೂನು ಅಥವಾ ಶಾಸನಬದ್ಧ ನಿಯಮಗಳ ಅಡಿಯಲ್ಲಿ ಭಾರತದ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್ ಹೊಂದಿರುವವರು ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವುದನ್ನು ತಡೆಯುವ ಯಾವುದೇ ನಿಬಂಧನೆಗಳಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
'ಯಾವುದೇ ಕಾರಣ, ಪೂರಕ ದಾಖಲೆ ಅಥವಾ ನಿರ್ದಿಷ್ಟ ಶಾಸನಬದ್ಧ ಉಲ್ಲಂಘನೆಯನ್ನು ಬಹಿರಂಗಪಡಿಸದೆ ಈ ನೋಟಿಸ್ ನೀಡಲಾಗಿದೆ. ವಿಚಾರಣೆ ನಡೆಸದೆ, ಶೋಕಾಸ್ ನೋಟಿಸ್ ನೀಡದೆ ಅಥವಾ ಆರೋಪಿತ ಉಲ್ಲಂಘನೆಗಳಿಗೆ ಉತ್ತರಿಸಲು ಅರ್ಜಿದಾರರಿಗೆ (ಇಮ್ರಾನ್ ಖಾನ್) ಯಾವುದೇ ಅವಕಾಶ ನೀಡಿಲ್ಲ' ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮಹೇಶಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇಥ್ನಾ ಅವರನ್ನೊಳಗೊಂಡ ಪೀಠದ ಮುಂದೆ ಇಮ್ರಾನ್ ಖಾನ್ ಅರ್ಜಿಯನ್ನು ತುರ್ತು ವಿಚಾರಣೆಗೆ ಪ್ರಸ್ತಾಪಿಸುವ ನಿರೀಕ್ಷೆಯಿದೆ.
ಮುಂಬೈಯಲ್ಲಿ ಅಕ್ಟೋಬರ್ 10ರಂದು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಇಮ್ರಾನ್ ಅವರನ್ನು ಕೆಲಕಾಲ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ, ಅಕ್ಟೋಬರ್ 10ರಂದು ನಗರದ 'ಆಗಸ್ಟ್ ಕ್ರಾಂತಿ ಮೈದಾನ'ದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್ ಭಾಗವಹಿಸಿದ್ದರು. ಖಾನ್ ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಗಿತ್ತು.
ಅಮೆರಿಕದ ಪ್ರಜೆಯಾಗಿರುವ ನಟನನ್ನು ಕೂಡಲೇ ಆ ದೇಶಕ್ಕೆ ಗಡಿಪಾರು ಮಾಡಬೇಕು. ನಟನ ಪೌರತ್ವ ಸ್ಥಿತಿಗತಿಯ ಕುರಿತಂತೆ ಕೂಡಲೇ ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಕಿರೀಟ್ ಸೋಮಯ್ಯ ಅವರು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದರು.
'ಇಮ್ರಾನ್ ಖಾನ್ ಅವರು ವಿದೇಶಿ ಪ್ರಜೆಯಾಗಿದ್ದು, ದೇಶದ ನಾಗರಿಕರಲ್ಲ. ವಿದೇಶಿ ಹಾಗೂ ವಲಸೆ ಕಾಯ್ದೆಯ ಅಡಿಯಲ್ಲಿ ವಿದೇಶಿ ಪ್ರಜೆಗಳು ಭಾರತದ ನೆಲದಲ್ಲಿ ನಡೆಯುವ ರಾಜಕೀಯ ಪ್ರತಿಭಟನೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧವಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



