ಕಾಸರಗೋಡು: ಮಧೂರು ಉಳಿಯತ್ತಡ್ಕ ಮೀನು ಮಾರುಕಟ್ಟೆ ಸಮೀಪದ ಉಳಿಯತ್ತಡ್ಕ ಪಳ್ಳಂ ಕ್ವಾರ್ಟರ್ಸ್ ನಿವಾಸಿ ಸತ್ತಾರ್ ಕೆ. (37) ಅವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧೂರು ಅರಂತೋಡು ನಿವಾಸಿ ಮೊಹಮ್ಮದ್ ಅಫ್ವಾಸ್ (33) ಎಂಬಾತನನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಶಿರಿಬಾಗಿಲು ಮಂಜತ್ತಡ್ಕ ನಿವಾಸಿ ಮೆಹರೂಫ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 26ರಂದು ಸಂಜೆ ಉಳಿಯತ್ತಡ್ಕ ಮೀನು ಮಾರುಕಟ್ಟೆ ಸಮೀಪ ಸತ್ತಾರ್ ಅವರನ್ನು ಕಾರಿನಿಂದ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ ಬಳಿಕ, ಮಾರಕಾಯುಧದಿಂದ ಇರಿದು ಗಾಯಗೊಳಿಸಲಾಗಿತ್ತು ಎನ್ನಲಾಗಿದೆ.
ಈ ಕುರಿತು ಸತ್ತಾರ್ ನೀಡಿದ ದೂರಿನ ಆಧಾರದಲ್ಲಿ ವಿದ್ಯಾನಗರ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಮೊಹಮ್ಮದ್ ಅಫ್ವಾಸ್ನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.


