ನವದೆಹಲಿ: ವಿದ್ಯಾರ್ಥಿ ಸಂಘದ ಪುನರಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಂಡಿದ್ದು, ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಪ್ರಸಕ್ತ ಸೆಮಿಸ್ಟರ್‌ನ ತರಗತಿಗಳು ಮತ್ತು ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲು ನಿರ್ಧರಿಸಿದೆ.
ನವೆಂಬರ್ 24ರವರೆಗೆ ತರಗತಿಗಳು ಆನ್‌ಲೈನ್‌ನಲ್ಲಿ ನಡೆಯಲಿವೆ.
ನವೆಂಬರ್ 25ರಿಂದ 30ರವರೆಗೆ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳು ನಡೆಯಲಿದ್ದು, ಡಿಸೆಂಬರ್ 1ರಿಂದ 24ರವರೆಗೆ ಸೆಮಿಸ್ಟರ್ ಅಂತ್ಯದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಡಿಸೆಂಬರ್ 25ರಿಂದ ಜನವರಿ 12ರವರೆಗೆ ರಜೆ ಇರಲಿದ್ದು, 2027ರ ಜನವರಿ 13ರಿಂದ ಮುಂದಿನ ಸೆಮಿಸ್ಟರ್ ಆರಂಭವಾಗಲಿದೆ. ಎಂದು ಅಕ್ಟೋಬರ್ 28ರಂದು ಹೊರಡಿಸಲಾದ ಆದೇಶದಲ್ಲಿ ಹೇಳಲಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸ್ತುತ ಕ್ಯಾಂಪಸ್ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿಲ್ಲ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ಆದರೆ, ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘವು ಈ ನಿರ್ಧಾರವನ್ನು ವಿರೋಧಿಸಿದ್ದು, ಭೌತಿಕ ತರಗತಿಗಳು ಪುನರಾರಂಭವಾಗುವವರೆಗೆ ಆನ್‌ಲೈನ್ ತರಗತಿಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ. ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ನೀಡಲು ಸ್ಪಷ್ಟ ಗಡುವು ಪ್ರಕಟಿಸಬೇಕು ಮತ್ತು ಪ್ರತಿಭಟನಾಕಾರರೊಂದಿಗೆ ಆಡಳಿತ ಮಂಡಳಿ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದೆ.
2006ರಿಂದ ನಿಷ್ಕ್ರಿಯವಾಗಿರುವ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಅಕ್ಟೋಬರ್ 26ರಂದು ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳೊಳಗೆ ಚುನಾವಣೆ ನಡೆಸುವುದಾಗಿ ವಿಶ್ವವಿದ್ಯಾಲಯ ಭರವಸೆ ನೀಡಿತ್ತು. ಆದರೆ, ಸಂವಿಧಾನದ ಅನುಮೋದನೆಗೆ ಕಾಲಮಿತಿ ನಿಗದಿಪಡಿಸದಿರುವುದಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ, ಅಕ್ಟೋಬರ್ 27ರ ರಾತ್ರಿ ಪ್ರತಿಭಟನಾಕಾರರು ಕ್ಯಾಂಪಸ್‌ನ ಗೇಟ್‌ಗಳು, ಗೋಡೆಗಳು ಮತ್ತು ಸಿಸಿಟಿವಿ ವ್ಯವಸ್ಥೆಗೆ ಹಾನಿ ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯ ಆರೋಪಿಸಿದೆ. ಈ ಆರೋಪಗಳೂ ವಿವಾದಕ್ಕೆ ಕಾರಣವಾಗಿವೆ.
ಕಾಂಗ್ರೆಸ್ ಆಕ್ರೋಶ
ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಕ್ರಮವನ್ನು ಕಾಂಗ್ರೆಸ್ ನಾಯಕ ಪವನ್ ಖೇರಾ ಟೀಕಿಸಿದ್ದು, 'ವಿದ್ಯಾರ್ಥಿ ಸಂಘದ ಪುನಃಸ್ಥಾಪನೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ನಿರ್ಬಂಧ ಹೇರುವುದು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ' ಎಂದು ಕಿಡಿ ಕಾರಿದ್ದಾರೆ.
'ಭಾರತದಲ್ಲಿ ಹಲವು ತಿಂಗಳುಗಳಿಂದ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇದೀಗ ಅದು ಜಾಮಿಯಾದಲ್ಲಿ ಹೆಚ್ಚು ಔಪಚಾರಿಕ ಸ್ವರೂಪ ಪಡೆದುಕೊಂಡಿದೆ' ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.


