ಅಮರಾವತಿ (PTI): ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ 'ಅರ್ನಬ್' ಚಂಡಮಾರುತವು ಬುಧವಾರ ಬೆಳಿಗ್ಗೆ ಆಂಧ್ರ ಪ್ರದೇಶದ ಕರಾವಳಿಯನ್ನು ದಾಟಿದ್ದು, ಹಲವು ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. 13 ಜಿಲ್ಲೆಗಳಿಗೆ ದಿಢೀರ್ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ರಸ್ತೆಗಳಿಗೆ ಹಾನಿಯಾಗಿವೆ. ಚಂಡಮಾರುತಕ್ಕೆ ಸಂಬಂಧಿಸಿದ ಪ್ರತ್ಯೇಕ ಅವಘಡಗಳಲ್ಲಿ
ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಚಂಡಮಾರುತವು ಬುಧವಾರ ಬೆಳಗಿನ ಜಾವ 2ರಿಂದ ಬೆಳಿಗ್ಗೆ 8ರ ನಡುವೆ ಆಂಧ್ರ ಪ್ರದೇಶ ಮತ್ತು ಯಾನಮ್ ಕರಾವಳಿಯನ್ನು ದಾಟಿದೆ. ಕರಾವಳಿಗೆ ಅಪ್ಪಳಿಸಿದ ಬಳಿಕ ಅಲ್ಪ ದುರ್ಬಲಗೊಂಡಿ
ರುವ ಚಂಡಮಾರುತ ಒಡಿಶಾದತ್ತ ಮುಂದುವರಿದಿದೆ' ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಕೆಲವೆಡೆ 20 ಸೆಂ.ಮೀಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ ಕಾರಣ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬುಧವಾರ ಬೆಳಿಗ್ಗೆ ಪರಿಸ್ಥಿತಿಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಬಾಧಿತ ಜಿಲ್ಲೆಗಳಲ್ಲಿ ತಕ್ಷಣವೇ ಪರಿಹಾರ ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೂವರ ಸಾವು: ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ, ಮರ ಬಿದ್ದ ಪರಿಣಾಮ 46 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ವಿಶಾಖಪಟ್ಟಣಂನಲ್ಲಿ 53 ವರ್ಷದ ವ್ಯಕ್ತಿ ಹಾಗೂ ಅನಕಾಪಲ್ಲಿ ಜಿಲ್ಲೆಯ ಯೆಲಮಂಚಿಲಿ ಪಟ್ಟಣದಲ್ಲಿ 55 ವರ್ಷದ ಮಹಿಳೆಯೊಬ್ಬರು ವಿದ್ಯುತ್ ತಂತಿ ತುಳಿದು ಮೃತಪಟ್ಟಿದ್ದಾರೆ.
ಭೀಮಾವರಂನ ದೇವಸ್ಥಾನದ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಂಟೆಗೆ 96 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ: ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬುಧವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಮಚಲಿಪಟ್ಟಣದಲ್ಲಿ ಗಾಳಿಯ ಗರಿಷ್ಠ ವೇಗ ದಾಖಲಾಗಿದೆ. ಇಲ್ಲಿ ಗಂಟೆಗೆ 96 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ. ವಿಶಾಖಪಟ್ಟಣ ಮತ್ತು ಕಾಕಿನಾಡದಲ್ಲಿ ಗಾಳಿಯ ವೇಗ ಗಂಟೆಗೆ 80 ಕಿ.ಮೀ ಹಾಗೂ ಕಳಿಂಗಪಟ್ಟಣದಲ್ಲಿ ಗಂಟೆಗೆ 70 ಕಿ.ಮೀ. ದಾಖಲಾಗಿದೆ.
ಒಡಿಶಾದಲ್ಲೂ ಭಾರಿ ಮಳೆ
ಚಂಡಮಾರುತದಿಂದಾಗಿ ದಕ್ಷಿಣ ಒಡಿಶಾದ ಹಲವೆಡೆ ಭಾರಿ ಮಳೆಯಾಗಿದೆ. 'ಮುನ್ನೆಚ್ಚರಿಕೆ ಕ್ರಮವಾಗಿ 30,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದ್ದು, ಹಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ' ಎಂದು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಬುಧವಾರ ತಿಳಿಸಿದ್ದಾರೆ.
'ದಕ್ಷಿಣ ಒಡಿಶಾದ ಎಲ್ಲಾ ಜಿಲ್ಲೆಗಳ ತಗ್ಗು ಪ್ರದೇಶಗಳು ಹಾಗೂ ಭೂಕುಸಿತದ ಅಪಾಯ ಇರುವ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿದಿದೆ' ಎಂದಿದ್ದಾರೆ.
ಪ್ರಮುಖ ಅಂಶಗಳು
* ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಅಕ್ಟೋಬರ್ 31ರವರೆಗೆ ಭಾರಿ ಮಳೆಯ ಮನ್ಸೂಚನೆ ನೀಡಲಾಗಿದೆ
* ಪೂರ್ವ ಮೇದಿನಿಪುರ, ದಕ್ಷಿಣ 24 ಪರಗಣ, ಜಾರ್‌ಗ್ರಾಮ, ಪಶ್ಚಿಮ ಮೇದಿನಿಪುರ, ಬಂಕುರಾ ಮತ್ತು ಪುರುಲಿಯಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ
* ಚಂಡಮಾರುತದಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ನೆರವಾಗುವಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೋರಿದ್ದಾರೆ.
13 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ
ಹವಾಮಾನ ಇಲಾಖೆಯು ಆಂಧ್ರ ಪ್ರದೇಶದ 13 ಜಿಲ್ಲೆಗಳಿಗೆ ಗುರುವಾರ ಬೆಳಗಿನ 5.30ರ ವರೆಗೆ ದಿಢೀರ್ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ. ಬಾಪಟ್ಲ, ಗುಂಟೂರು, ಎನ್‌ಟಿಆರ್, ಕೃಷ್ಣಾ, ಏಲೂರು, ಪೂರ್ವ ಗೋದಾವರಿ, ಕಾಕಿನಾಡ, ಅಲ್ಲೂರಿ ಸೀತಾರಾಮ ರಾಜು, ವಿಶಾಖಪಟ್ಟಣ, ವಿಜಯನಗರ, ಅನಕಾಪಲ್ಲಿ, ಪಾರ್ವತಿಪುರಂ ಮಾನ್ಯಂ, ಪಶ್ಚಿಮ ಗೋದಾವರಿ ಜಿಲ್ಲೆಗಳು ಹಾಗೂ ಪುದುಚೆರಿಯ ಯಾನಮ್ ಜಿಲ್ಲೆಗೆ ಎಚ್ಚರಿಕೆ ನೀಡಲಾಗಿದೆ.
ಹೆಚ್ಚು ಮಳೆ ಎಲ್ಲಿ?
ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಗರಿವಿಡಿಯಲ್ಲಿ ಅತಿಹೆಚ್ಚು ಅಂದರೆ 26 ಸೆಂ.ಮೀ. ಮಳೆಯಾಗಿದೆ. ಅನಕಾಪಲ್ಲಿ, ಶೃಂಗವರಪುಕೋಟ, ವೇಪಾಡ, ಚೀಪುರಪಲ್ಲೆಯಲ್ಲಿ ತಲಾ 25 ಸೆಂ.ಮೀ. ಮಳೆ ದಾಖಲಾಗಿದೆ.
ಭೀಮುನಿಪಟ್ನಂ, ಮೆಂಟಾಡ, ಯೆಲಮಂಚಿಲಿಯಲ್ಲಿ 24 ಸೆಂ.ಮೀ, ಗಂಟ್ಯಾಡ ಹಾಗೂ ರಣಸ್ಥಲಂನಲ್ಲಿ 23 ಸೆಂ.ಮೀ., ಗಜಪತಿನಗರಂ, ನೆಲ್ಲಿಮೇರ್ಲ, ವಿಶಾಖಪಟ್ಟಣ ಮತ್ತು ಮೇರಕಮುಡಿದಾಂನಲ್ಲಿ 22 ಸೆಂ.ಮೀ., ಚೋಡವರಂ ಹಾಗೂ ಬೊಂಡಪಲ್ಲೆಯಲ್ಲಿ 22 ಸೆಂ.ಮೀ. ಮಳೆಯಾಗಿದೆ.



