ಲಖನೌ: ಉತ್ತರ ಪ್ರದೇಶ ವಿಧಾನ ಪರಿಷತ್ನ (ಎಂಎಲ್ಸಿ) ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ. ಇದು ಪಕ್ಷದ ಅಭ್ಯರ್ಥಿಗಳ ಆಯ್ಕೆ, ಆಂತರಿಕ ಭಿನ್ನಮತ ಮತ್ತು ಸ್ಥಳೀಯ ಮಟ್ಟದ ಕಾರ್ಯಕರ್ತರ ಸಮನ್ವಯತೆ ಕುರಿತು ಚರ್ಚೆ ಹುಟ್ಟುಹಾಕಿದೆ. ಸಮಾಜವಾದಿ ಪಕ್ಷವು ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರ ಹೊರತಾಗಿಯೂ ಪಶ್ಚಿಮ ಯುಪಿಯಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ.
ಆಗ್ರಾ, ವಾರಾಣಸಿ ಮತ್ತು ಲಖನೌ ಕ್ಷೇತ್ರಗಳ ಫಲಿತಾಂಶ ಬಿಜೆಪಿಗೆ ಹಿನ್ನಡೆಯಾಗಿದೆ. ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಯಕರ್ತರ ವಿರೋಧದ ನಡುವೆಯೂ ಕೆಲವು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿ ಜನ ಬೆಂಬಲ ಹೊಂದಿದ್ದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.
ಪರಿಷತ್ ಚುನಾವಣೆಯ ಫಲತಾಂಶದ ಕುರಿತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಪ್ರತಿಕ್ರಿಯಿಸಿದ್ದಾರೆ. 'ಪಕ್ಷದ ಸಾಧನೆಯನ್ನು ಪರಿಶೀಲಿಸಲಾಗುವುದು. ಎಸ್ಪಿ ಗೆಲ್ಲುವ ನಿರೀಕ್ಷೆ ಇಲ್ಲದ ಕ್ಷೇತ್ರಗಳಲ್ಲಿ ಹೇಗೆ ಗೆಲುವು ಸಾಧಿಸಿತು? ಎಂಬುದನ್ನೂ ಪರಿಶೀಲಿಸಲಾಗುತ್ತದೆ. ವಿಶೇಷವಾಗಿ ವಾರಾಣಸಿಯ ಸೋಲು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ' ಎಂದಿದ್ದಾರೆ.
ಬಿಜೆಪಿಗೆ ಹಿನ್ನಡೆಗೆ ಪ್ರಮುಖ ಕಾರಣಗಳು
ಆಗ್ರಾ ಶಿಕ್ಷಕರ ಕ್ಷೇತ್ರ: ಬಿಜೆಪಿಯಿಂದ ಟಿಕೆಟ್ ಸಿಗದೆ ಎಸ್ಪಿಯಿಂದ ಸ್ಪರ್ಧೆ
ಆಗ್ರಾ ಶಿಕ್ಷಕರ ಕ್ಷೇತ್ರದ ಫಲಿತಾಂಶ ಅಭ್ಯರ್ಥಿಗಳ ಆಯ್ಕೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ. ಆಕಾಶ್ ಅಗರವಾಲ್ ಅವರು ಆರಂಭದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿಯ ಒಂದು ಗುಂಪು ಹರಿಕಿಶೋರ್ ತಿವಾರಿ ಅವರಿಗೆ ಟಿಕೆಟ್ ನೀಡಲು ಒಲವು ತೋರಿಸಿತ್ತು ಎನ್ನಲಾಗಿದೆ. ಇದರಿಂದ ಆಕಾಶ್ ಅಗರವಾಲ್ ಅವರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿ, ಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಹರಿಕಿಶೋರ್ ತಿವಾರಿ ಅವರನ್ನು ಸೋಲಿಸಿ, ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಬಿಜೆಪಿಯೊಳಗಿನ ಭಿನ್ನಮತ ಪಕ್ಷಕ್ಕೆ ಹಿನ್ನಡೆಯಾಗಿರಬಹುದು ಎಂಬ ಚರ್ಚೆ ಆರಂಭವಾಗಿದೆ.
ವಾರಾಣಸಿ ಪದವೀಧರ ಕ್ಷೇತ್ರ,ಸೋತ ಅಭ್ಯರ್ಥಿಗೆ ಮತ್ತೆ ಅವಕಾಶ:
ವಾರಾಣಸಿ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಕೇದಾರನಾಥ್ ಸಿಂಗ್ ಅವರಿಗೆ ಮತ್ತೆ ಟಿಕೆಟ್ ನೀಡಿತ್ತು. ಆದರೆ ಅವರು 2020ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಆಶುತೋಷ್ ಸಿನ್ಹಾ ವಿರುದ್ಧ ಸೋತಿದ್ದರು. ಹಿಂದಿನ ಚುನಾವಣೆಯಲ್ಲಿ ಸೋತಿದ್ದರೂ ಮತ್ತೆ ಅವರಿಗೇ ಮಣೆ ಹಾಕಿದ್ದು, ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡದಿರುವುದು ಸೋಲಿಗೆ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾಗಿರುವ ವಾರಾಣಸಿಯಲ್ಲಿ ಸಮಾಜವಾದಿ ಪಕ್ಷದ ಗೆಲುವು ಗಮನಾರ್ಹ ಅಂಶವಾಗಿದೆ.
ವಾರಾಣಸಿ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಮೋದ್ ಮಿಶ್ರಾ ಅವರ ವಿರುದ್ಧ ಎಸ್ಪಿ ಅಭ್ಯರ್ಥಿಯಾಗಿ ಲಾಲ್ ಬಿಹಾರಿ ಯಾದವ್ ಕಣಕ್ಕಿಳಿದಿದ್ದರು. ಅವರು ಶಿಕ್ಷಕರ ಕ್ಷೇತ್ರದ ರಾಜಕೀಯದಲ್ಲಿ ಅನುಭವ ಹೊಂದಿರುವ ನಾಯಕರಾಗಿದ್ದರು. ಈ ಕ್ಷೇತ್ರದಲ್ಲಿ ಅವರಿಗೆ ಪ್ರಬಲ ಬೆಂಬಲವಿತ್ತು. ಅವರ ಅನುಭವ ಮತ್ತು ಸ್ಥಳೀಯ ಸಂಪರ್ಕಗಳು ಗೆಲುವಿಗೆ ನೆರವಾಗಿರಬಹುದು.
ವಾರಾಣಸಿಯ ಪದವೀಧರ ಮತ್ತು ಶಿಕ್ಷಕರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿರುವುದು ಪಕ್ಷದ ಅಭ್ಯರ್ಥಿಗಳ ಆಯ್ಕೆ ಮತ್ತು ಸಂಘಟನೆಯ ಬಲದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಲಖನೌ ಪದವೀಧರ ಕ್ಷೇತ್ರ: ಸ್ಥಳೀಯ ವಿರೋಧವನ್ನು ಕಡೆಗಣಿಸಿದ ಬಿಜೆಪಿ
ಲಖನೌ ಪದವೀಧರ ಕ್ಷೇತ್ರದಲ್ಲಿ ಅವನೀಶ್ ಸಿಂಗ್ ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ ನಿರ್ಧಾರಕ್ಕೆ ಆರಂಭದಿಂದಲೇ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ಅಭ್ಯರ್ಥಿಯನ್ನು ಬದಲಾಯಿಸಲು ಪಕ್ಷಕ್ಕೆ ಸಾಕಷ್ಟು ಸಮಯವಿದ್ದರೂ, ಸ್ಥಳೀಯ ನಾಯಕರ ವಿರೋಧಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.
ಸ್ಥಳೀಯ ಕಾರ್ಯಕರ್ತರ ಅಸಮಾಧಾನ ಚುನಾವಣೆಯ ಪಲಿತಾಂಶದ ಮೇಲೆ ಪರಿಣಾಮ ಬೀರಿದ್ದು, ಬಿಜೆಪಿಯ ಸಂಘಟನೆಯೊಳಗಿನ ಸಮಸ್ಯೆಯನ್ನು ತೋರಿಸಿದೆ. ಪಕ್ಷದ ಹಿರಿಯ ನಾಯಕರು ತೆಗೆದುಕೊಳ್ಳುವ ನಿರ್ಧಾರ ಮತ್ತು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯಗಳ ನಡುವೆ ಅಂತರವಿದೆ ಎಂಬುದು ಗಮನಾರ್ಹ ಸಂಗತಿ.
ಝಾನ್ಸಿ-ಅಲಹಾಬಾದ್ ಕ್ಷೇತ್ರ: ಅಭ್ಯರ್ಥಿ ಆಯ್ಕೆಯ ಕುರಿತು ಪ್ರಶ್ನೆ
ಝಾನ್ಸಿ-ಅಲಹಾಬಾದ್ ಕ್ಷೇತ್ರದಲ್ಲಿಯೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಈ ಕ್ಷೇತ್ರದಲ್ಲಿ ಅಶೋಕ್ ರಾಥೋರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ನಿರ್ಧಾರವೇ ಈಗ ಪರಿಶೀಲನೆಗೆ ಒಳಪಟ್ಟಿದೆ.
ಹಲವು ಕ್ಷೇತ್ರಗಳ ಫಲಿತಾಂಶಗಳು ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಲೋಪಗಳಿದ್ದವೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಆದರೆ ಅಭ್ಯರ್ಥಿಗಳ ಆಯ್ಕೆ, ಪಕ್ಷದೊಳಗಿನ ಭಿನ್ನಮತ ಮತ್ತು ಮತದಾರರ ಮನಸ್ಥಿತಿ ಎಷ್ಟು ಪರಿಣಾಮ ಬೀರಿದೆ ಎಂಬುದನ್ನು ತಿಳಿಯಲು ಪಕ್ಷವು ವಿವರವಾದ ಪರಿಶೀಲನೆ ನಡೆಸಬೇಕಿದೆ.
ಎಸ್ಪಿಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಸವಾಲು
ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯನ್ನು ಪರಿಶೀಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಚುನಾವಣೆಯ ಫಲಿತಾಂಶಗಳು ಸಮಾಜವಾದಿ ಪಕ್ಷಕ್ಕೂ ಕೆಲವು ಎಚ್ಚರಿಕೆಗಳನ್ನು ನೀಡಿದೆ. ವಿಶೇಷವಾಗಿ ಪಶ್ಚಿಮ ಯುಪಿಯಲ್ಲಿ ಎಸ್ಪಿ ಇನ್ನಷ್ಟು ಬಲಗೊಳ್ಳಬೇಕಿದೆ.
ಮೀರತ್-ಸಹಾರನ್ಪುರ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬರೇಲಿ-ಮುರಾದಾಬಾದ್ ಭಾಗದಲ್ಲಿಯೂ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಈ ಫಲಿತಾಂಶಗಳು ಪಶ್ಚಿಮ ಯುಪಿಯಲ್ಲಿ ಎಸ್ಪಿಗೆ ಇರುವ ಸವಾಲುಗಳನ್ನು ಎತ್ತಿ ತೋರಿಸಿದೆ. ಈ ಪ್ರದೇಶದಲ್ಲಿ ಎಸ್ಪಿ ನಿರಂತರ ಪ್ರಾಬಲ್ಯ ಸಾಧಿಸಲು ಇನ್ನಷ್ಟು ಪ್ರಯತ್ನಿಸಬೇಕಿದೆ.
ಪಶ್ಚಿಮ ಯುಪಿಯಲ್ಲಿ ಗಣನೀಯವಾಗಿ ಮುಸ್ಲಿಂ ಮತದಾರರ ಪ್ರಮಾಣ ಹೆಚ್ಚಿದೆ. 2027ರ ವಿಧಾನಸಭಾ ಚುನಾವಣೆಯಲ್ಲಿ ಮೇಲುಗೈ ಸಾಧಿಸಬೇಕಾದರೆ, ಈ ಪ್ರದೇಶದ ಗೆಲುವು ಎಸ್ಪಿಗೆ ಬಹಳ ಮುಖ್ಯ.
ಇತರ ಕ್ಷೇತ್ರಗಳಲ್ಲಿ ಎಸ್ಪಿ ಗೆಲುವು ಸಾಧಿಸಿದ್ದರೂ, ಅದರಿಂದ ಪಶ್ಚಿಮ ಉತ್ತರ ಪ್ರದೇಶದಲ್ಲಿ ರಾಜಕೀಯ ಸಮತೋಲನ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈ ಭಾಗದಲ್ಲಿ ಬಿಜೆಪಿ ಬಲವಾದ ನೆಲೆ ಹೊಂದಿದೆ ಎಂಬುದನ್ನು ಎಂಎಲ್ಸಿ ಚುನಾವಣೆಯ ಫಲಿತಾಂಶಗಳು ತೋರಿಸಿದೆ.
2027ರ ವಿಧಾನಸಭಾ ಚುನಾವಣೆಗೆ ಎಚ್ಚರಿಕೆಯ ಗಂಟೆ
ಎಂಎಲ್ಸಿ ಚುನಾವಣೆಯ ಫಲಿತಾಂಶಗಳನ್ನು ನೇರವಾಗಿ 2027ರ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರು ಇತರ ಕ್ಷೇತ್ರಗಳ ಮತದಾರರಿಗಿಂತ ಭಿನ್ನವಾಗಿರುತ್ತಾರೆ. ಈ ಚುನಾವಣೆಗಳಲ್ಲಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಜನರ ಜೊತೆಗಿನ ಸಂಪರ್ಕ ಮತ್ತು ಸ್ಥಳೀಯ ಸಂಘಟನೆಯ ಬಲ ಪ್ರಮುಖ ಪಾತ್ರ ವಹಿಸುತ್ತವೆ.
ಆದ್ದರಿಂದ ಎಂಎಲ್ಸಿ ಚುನಾವಣೆಯ ಗೆಲುವು ಅಥವಾ ಸೋಲು ವಿಧಾನಸಭಾ ಚುನಾವಣೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗದು. ಆದರೆ ಈ ಫಲಿತಾಂಶ ಬಿಜೆಪಿ ಮತ್ತು ಎಸ್ಪಿ ಎರಡೂ ಪಕ್ಷಗಳಿಗೆ ಕೆಲವು ಮಹತ್ವದ ರಾಜಕೀಯ ಸಂದೇಶಗಳನ್ನು ನೀಡಿದೆ.



