ಪೆರ್ಲ: ನಾಲಂದಾ ಆಟ್ರ್ಸ್- ಸೈನ್ಸ್ ಕಾಲೇಜಿನ 'ಭೂಮಿತ್ರ ಸೇನೆ'ಯ ವತಿಯಿಂದ ಅ. 10 ರಂದು ನೀರ್ಚಾಲು ಸಮೀಪದ ಬನವಾಸಿಗೆ ಶೈಕ್ಷಣಿಕ ಹಾಗೂ ಪರಿಸರ ಅಧ್ಯಯನ ಪ್ರವಾಸ ಆಯೋಜಿಸಲಾಗಿದೆ. ಕಾಲೇಜಿನ ಭೂಮಿತ್ರಸೇನೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪ್ರಾಂಶುಪಾಲ ಡಾ. ಮೋಹನ ಕುಂಟಾರ್ ಅವರ ನೇತೃತ್ವದಲ್ಲಿ ಈ ತಂಡವು ಬನವಾಸಿಯ ಸುಸ್ಥಿರ ಕೃಷಿ ಮಾದರಿಯನ್ನು ವೀಕ್ಷಿಸಲಿದೆ.
ದಿನಪೂರ್ತಿ ನಡೆಯುವ ಈ ಭೇಟಿಯಲ್ಲಿ ವಿದ್ಯಾರ್ಥಿಗಳು ಬನವಾಸಿಯ ಜಲಸಂರಕ್ಷಣೆಯ ಮಳೆಕೊಯ್ಲು ಕೊಳ, ಸಮೃದ್ಧ ಔಷಧೀಯ ಸಸ್ಯಗಳ ತೋಟ ಹಾಗೂ ಸಾಂಪ್ರದಾಯಿಕ ಭತ್ತದ ಕೃಷಿ ಪದ್ಧತಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅಧ್ಯಯನ ನಡೆಸಲಿದ್ದಾರೆ.
ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಗ್ರಾಮೀಣ ಪರಂಪರೆಯ ಅಡುಗೆ ವಿಧಾನದ ನೇರ ಅನುಭವ ಪಡೆಯಲಿದ್ದಾರೆ. ಬಂಜರು ಭೂಮಿಯನ್ನು ಫಲವತ್ತಾದ ಕೃಷಿ ಕಾನನ 'ಬನವಾಸಿ'ಯನ್ನಾಗಿ ಪರಿವರ್ತಿಸಿದ ಡಾ. ರತ್ನಾಕರ ಮಲ್ಲಮೂಲೆ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ತಮ್ಮ ದೀರ್ಘ ಕೃಷಿ ತಪಸ್ಸಿನ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ಕೃಷಿ, ಜಲಸಂರಕ್ಷಣೆ ಹಾಗೂ ಪರಿಸರ ಸಮತೋಲನದ ಕುರಿತು ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದವೂ ನಡೆಯಲಿದೆ.


