ಕಾಸರಗೋಡು: ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ಮಾಡಲು ವಾಹನಗಳನ್ನು ನೀಡಿದ ಪೋಷಕರು ಹಾಗೂ ವಾಹನಗಳ ನೋಂದಾಯಿತ ಮಾಲೀಕರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಸಂಬಂಧ ವಿದ್ಯಾನಗರ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಅಪಘಾತಗಳು ಹಾಗೂ ಸಾವು-ನೋವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಿಗೆ ವಾಹನಗಳನ್ನು ನೀಡುವ ಪೋಷಕರು ಅಥವಾ ವಾಹನಗಳ ಆರ್‌ಸಿ ಮಾಲೀಕರ ವಿರುದ್ಧ ಪೊಲೀಸರು ಕ್ರಮ ಆರಂಭಿಸಿದ್ದಾರೆ.
ಇದೇ ರೀತಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕುಂಬಳೆ ಠಾಣೆ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತರಿಗೆ ವಾಹನಗಳನ್ನು ನೀಡಿದ ಬಂದ್ಯೋಡು, ಆರಿಕ್ಕಾಡಿ ಹಾಗೂ ಬಾಡೂರು ನಿವಾಸಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡು ಸ್ಕೂಟರ್‌ಗಳು ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ, 17 ವರ್ಷದ ಬಾಲಕನಿಗೆ ಕಾರು ಚಲಾಯಿಸಲು ನೀಡಿದ ಆರೋಪದ ಮೇಲೆ ಬಾಲಕನ ತಾಯಿ ವಿರುದ್ಧ ಬೇಕಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಾದ್ಯಂತ ಇಂತಹ ಪ್ರಕರಣಗಳ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

