ಕಾಸರಗೋಡು: ನಗರದ ಪಳ್ಳಂನಲ್ಲಿ ಘಟನೆ; ಆಧಾರ್ ಕಾರ್ಡ್ ಮೂಲಕ ಮೃತನ ಗುರುತು ಪತ್ತೆ
ಕಾಸರಗೋಡು: ನಗರದ ಪಳ್ಳಂನಲ್ಲಿ ಚಲಿಸುತ್ತಿದ್ದ ರೈಲಿನಡಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ದೊರೆತ ಪರ್ಸ್ನಲ್ಲಿದ್ದ ಆಧಾರ್ ಕಾರ್ಡ್ನಲ್ಲಿನ ವಿಳಾಸದ ಆಧಾರದಲ್ಲಿ ಮೃತ ಯುವಕನನ್ನು ಪಾಲಕ್ಕಾಡ್ ಜಿಲ್ಲೆಯ ವಲ್ಲಪುಳ ತೆಚ್ಚಿಕ್ಕಾಟಿಲ್ ಕರುವಾಟ್ಟೂರು ನಿವಾಸಿ ಟಿ. ಜಿತಿನ್ (26) ಎಂದು ಗುರುತಿಸಲಾಗಿದೆ.
ಲೋಕೋ ಪೈಲಟ್ ನೀಡಿದ ಮಾಹಿತಿಯ ಮೇರೆಗೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹದ ಸಮೀಪ ಮೊಬೈಲ್ ಫೋನ್ ಕೂಡ ಪತ್ತೆಯಾಗಿದೆ. ಅದರಲ್ಲಿದ್ದ ಹಲವು ಫೋಟೋಗಳು ಮೃತ ಯುವಕನದ್ದೇ ಎಂದು ಶಂಕಿಸಲಾಗಿದೆ.
ತಿರುವನಂತಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪಳ್ಳಂ ತಲುಪುತ್ತಿದ್ದ ಸಂದರ್ಭದಲ್ಲಿ ಯುವಕ ರೈಲಿನಡಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಯುವಕನ ಮನೆಯವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಕುಟುಂಬದವರು ಆಗಮಿಸಿದ ಬಳಿಕವಷ್ಟೇ ಮೃತ ವ್ಯಕ್ತಿಯ ಗುರುತನ್ನು ಅಧಿಕೃತವಾಗಿ ದೃಢಪಡಿಸಲು ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

