ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ಇಸ್ರೇಲ್‌ನಲ್ಲಿ ಮತ್ತೊಂದು ಚುನಾವಣೆ ನಡೆಯುವ ಸಾಧ್ಯತೆ
ಜೆರುಸಲೇಂ: ಇಸ್ರೇಲ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಲಭಿಸದ ಹಿನ್ನೆಲೆಯಲ್ಲಿ, ಅರಬ್ ಪಕ್ಷಗಳು ಚುನಾವಣೆಯಲ್ಲಿ ಅಕ್ರಮ ಎಸಗಿ ಮತಗಳನ್ನು ಕಳವು ಮಾಡಿವೆ ಎಂದು ಆರೋಪಿಸಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷ ಕ್ಕಿಳಿದಿದೆ.
120 ಸದಸ್ಯ ಬಲದ ನೆಸೆಟ್‌ನಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 61 ಸ್ಥಾನಗಳನ್ನು ನೆತನ್ಯಾಹು ನೇತೃತ್ವದ ಬಲಪಂಥೀಯ ಮೈತ್ರಿಕೂಟ ಪಡೆಯಲು ಸಾಧ್ಯವಾಗಿಲ್ಲ. ಈ ನಡುವೆ ಅರಬ್ ಪಕ್ಷಗಳು ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ತಡೆಯುವ ಉದ್ದೇಶದಿಂದ ಲಿಕುಡ್ ಪಕ್ಷ ಗಂಭೀರ ಆರೋಪಗಳನ್ನು ಮಾಡಿದೆ.
ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಯಹೂದಿ ರಾಷ್ಟ್ರವನ್ನು ನಾಶಪಡಿಸಲು ಬಯಸುವ ಅರಬ್ ಪಕ್ಷಗಳು ಚುನಾವಣಾ ಫಲಿತಾಂಶವನ್ನು ಕಳವು ಮಾಡಿವೆ ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಲಿಕುಡ್ ಪಕ್ಷ ಆರೋಪಿಸಿದೆ.
ಮತದಾರರ ಮೇಲೆ ಪ್ರಭಾವ ಬೀರಲು ಭ್ರಷ್ಟಾಚಾರ, ಬೆದರಿಕೆ, ಹಿಂಸಾಚಾರ, ಸುಳ್ಳು ಪ್ರಚಾರ ಹಾಗೂ ನಿಷೇಧಿತ ಸಾಫ್ಟ್‌ವೇರ್‌ಗಳನ್ನು ಬಳಸಲಾಗಿದೆ ಎಂದೂ ಪಕ್ಷ ದೂರಿದೆ.
ಹಣ ಮತ್ತು ಮತಪತ್ರಗಳನ್ನು ಒಳಗೊಂಡ ಸಾವಿರಾರು ಲಕೋಟೆಗಳು ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಘಟನೆಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಲಿಕುಡ್ ಪಕ್ಷ ತಿಳಿಸಿದೆ.
ಶೇ.85ಕ್ಕೂ ಹೆಚ್ಚು ಮತಗಳ ಎಣಿಕೆ ಪೂರ್ಣಗೊಂಡಾಗ, ನೆತನ್ಯಾಹು ನೇತೃತ್ವದ ಬಲಪಂಥೀಯ ಮೈತ್ರಿಕೂಟ 53 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿತ್ತು. ಅವರ ಪ್ರಮುಖ ಎದುರಾಳಿ ಗಾಡಿ ಐಸೆನ್‌ಕೋಟ್ ಅವರ ಯಾಶಾರ್ ಪಕ್ಷ 48 ಸ್ಥಾನಗಳನ್ನು ಪಡೆದಿತ್ತು. ಅರಬ್ ಪಕ್ಷಗಳು ಒಟ್ಟು 19 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ ಎಂದು ವರದಿ ತಿಳಿಸಿದೆ.
ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯದ ಕಾರಣ ಇಸ್ರೇಲ್‌ನಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ.
ಎರಡೂ ಬಣಗಳಿಗೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಅಗತ್ಯವಾದ ಸ್ಥಾನಗಳು ಲಭಿಸದ ಹಿನ್ನೆಲೆಯಲ್ಲಿ, ಅರಬ್ ಪಕ್ಷಗಳ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಲು ಅವು ಮುಂದಾಗಲಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸರ್ಕಾರ ರಚನೆ ಸಾಧ್ಯವಾಗದಿದ್ದರೆ ದೇಶ ಮತ್ತೊಂದು ಚುನಾವಣೆಗೆ ಹೋಗುವ ಸಾಧ್ಯತೆಯಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿಯೂ ಹಾಗೂ ಫಲಿತಾಂಶ ಪ್ರಕಟವಾದ ಬಳಿಕವೂ ನೆತನ್ಯಾಹು ಅರಬ್ ಪಕ್ಷಗಳ ವಿರುದ್ಧ ಆರೋಪಗಳನ್ನು ಮಾಡಿದ್ದರು. ಮತದಾರರ ಮೇಲೆ ಪ್ರಭಾವ ಬೀರಲು ಹಣ ಬಳಸಿದ ಆರೋಪದ ಮೇಲೆ ಕೆಲವರನ್ನು ಬಂಧಿಸಲಾಗಿದೆ ಎಂಬ ವರದಿಗಳನ್ನು ಅವರು ಉಲ್ಲೇಖಿಸಿದ್ದರು.
ಮತದಾರರಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ಕೆಲವು ವ್ಯಕ್ತಿಗಳನ್ನು ಮತಗಟ್ಟೆಗಳ ಸಮೀಪ ಬಂಧಿಸಲಾಗಿದೆ ಎಂದು ಕೇಂದ್ರ ಚುನಾವಣಾ ಸಮಿತಿಯ ಅಧಿಕಾರಿಗಳೂ ದೃಢಪಡಿಸಿದ್ದಾರೆ. ಈ ಸಂಬಂಧ ನಡೆಸಿದ ಪರಿಶೀಲನೆ ವೇಳೆ ಹಣ ಮತ್ತು ಲಕೋಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


