ದೋಹಾ: ಇಸ್ರೇಲ್ ನ ರಾಷ್ಟ್ರೀಯ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಿದೆ ಹಾಗೂ ಫಲಿತಾಂಶದ ಮೇಲೆ ಪ್ರಭಾವ ಬೀರಲು ಹಣಕಾಸು ಒದಗಿಸಿದೆ ಎಂಬ ಆರೋಪಗಳನ್ನು ಖತರ್ ತಳ್ಳಿಹಾಕಿದೆ. ಇಸ್ರೇಲ್ ನ ಆಂತರಿಕ ರಾಜಕೀಯ ವಿವಾದಗಳಿಗೆ ತಮ್ಮ ದೇಶದ ಹೆಸರನ್ನು ಎಳೆದುತರುವ ಉದ್ದೇಶದಿಂದ ಕೆಲವು ರಾಜಕಾರಣಿಗಳು ಮತ್ತು ಮಾಧ್ಯಮಗಳು ತಪ್ಪು ಮಾಹಿತಿ ಹರಡುತ್ತಿವೆ ಎಂದು ಖತರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಘಿನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಸ್ರೇಲ್ ನ ರಾಜಕೀಯ ಮತ್ತು ಚುನಾವಣಾ ಸ್ಪರ್ಧೆಯಲ್ಲಿ ಖತರ್ ಗೆ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಖತರ್ ಬೆಂಬಲ ನೀಡುತ್ತಿದೆ, ಎಡಪಂಥೀಯರಿಗೆ ಹಣಕಾಸು ಒದಗಿಸುತ್ತಿದೆ ಮತ್ತು ಅರಬ್ ಮತದಾರರ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಆರೋಪಗಳು ಒಂದಕ್ಕೊಂದು ವಿರುದ್ಧವಾಗಿವೆ. ಖತರ್ ಇಸ್ರೇಲ್ ನ ಎಲ್ಲ ರಾಜಕೀಯ ಪಕ್ಷಗಳ ಮೇಲೆ ಪ್ರಭಾವ ಬೀರುತ್ತಿದೆ ಎಂಬಂತೆ ಆರೋಪಿಸಲಾಗುತ್ತಿದೆ ಎಂದು ಅಲ್-ಅನ್ಸಾರಿ ಟೀಕಿಸಿದ್ದಾರೆ.
'ಈ ಆರೋಪಗಳು ಆಧಾರರಹಿತವಾಗಿದ್ದು, ಅಪಾಯಕಾರಿ ಕೂಡ. ಇಸ್ರೇಲ್ ನ ಚುನಾವಣಾ ಚರ್ಚೆಗಳಲ್ಲಿ ಖತರ್ ಹೆಸರನ್ನು ಪದೇ ಪದೇ ಪ್ರಸ್ತಾಪಿಸುತ್ತಿರುವುದು, ಅಲ್ಲಿನ ಕೆಲವು ರಾಜಕಾರಣಿಗಳು ಮತ್ತು ಮಾಧ್ಯಮಗಳಿಗೆ ಖತರ್ ಬಗ್ಗೆ ಅತಿಯಾದ ಆಸಕ್ತಿ ಇರುವುದನ್ನು ತೋರಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಕೆಲವು ಇಸ್ರೇಲಿ ರಾಜಕಾರಣಿಗಳ ರಾಜಕೀಯ ವೈಫಲ್ಯಗಳಿಗೆ ಖತರ್ ಅನ್ನು ಬಲಿಪಶುವಾಗಿ ಬಳಸುವುದನ್ನು ಬಲವಾಗಿ ವಿರೋಧಿಸುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ವೈಫಲ್ಯಗಳಿಗೆ ಖತರ್ ಅನ್ನು ಹೊಣೆ ಮಾಡುವ ಬದಲು, ರಾಜಕಾರಣಿಗಳು ಮತದಾರರ ಆಶೋತ್ತರಗಳಿಗೆ ಸ್ಪಂದಿಸಬೇಕು ಮತ್ತು ತಮ್ಮ ನೀತಿಗಳಿಂದ ಈ ಪ್ರದೇಶದ ಮೇಲೆ ಉಂಟಾಗಿರುವ ಪರಿಣಾಮಗಳನ್ನು ಸರಿಪಡಿಸಲು ಗಮನಹರಿಸಬೇಕು ಎಂದು ಹೇಳಿದ್ದಾರೆ.
►ಫೆಲೆಸ್ತೀನ್ ಹಕ್ಕುಗಳಿಗೆ ಖತರ್ ಒತ್ತಾಯ
ಚುನಾವಣೆಯ ಬಳಿಕ ರಚನೆಯಾಗುವ ಯಾವುದೇ ಇಸ್ರೇಲಿ ಸರಕಾರವು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಸಂಬಂಧಿತ ನಿರ್ಣಯಗಳನ್ನು ಗೌರವಿಸಬೇಕು ಎಂದು ಖತರ್ ಒತ್ತಾಯಿಸಿದೆ. ಫೆಲೆಸ್ತೀನ್ ವಿಷಯವನ್ನು ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ಪರಿಗಣಿಸುವುದರ ಜೊತೆಗೆ, ಫೆಲೆಸ್ತೀನ್ ಜನರ ಮೂಲಭೂತ ಹಕ್ಕುಗಳನ್ನು ಗೌರವಿಸಬೇಕು ಎಂದು ಹೇಳಿದೆ.
ಈ ಹಕ್ಕುಗಳಲ್ಲಿ ಸ್ವಯಂ ನಿರ್ಣಯದ ಹಕ್ಕು ಹಾಗೂ 1967ರ ಗಡಿರೇಖೆಗಳ ಆಧಾರದ ಮೇಲೆ ಪೂರ್ವ ಜೆರುಸಲೆಮ್ ರಾಜಧಾನಿಯಾಗಿರುವ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಹಕ್ಕು ಪ್ರಮುಖವಾಗಿವೆ ಎಂದು ಅಲ್-ಅನ್ಸಾರಿ ತಿಳಿಸಿದ್ದಾರೆ.
ಮಧ್ಯವರ್ತಿಯಾಗಿ ನಿರ್ವಹಿಸುತ್ತಿರುವ ಪಾತ್ರ, ರಾಜತಾಂತ್ರಿಕ ಮತ್ತು ಮಾನವೀಯ ಪ್ರಯತ್ನಗಳು ಹಾಗೂ ಫೆಲೆಸ್ತೀನ್ ಜನರಿಗೆ ನೀಡುತ್ತಿರುವ ಬೆಂಬಲವನ್ನು ಖತರ್ ಮುಂದುವರಿಸಲಿದೆ. ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆ ಹೆಚ್ಚಿಸುವ ನ್ಯಾಯಯುತ ಹಾಗೂ ಸಮಗ್ರ ಶಾಂತಿ ಸ್ಥಾಪನೆಗಾಗಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಸಹಕರಿಸುವುದಾಗಿಯೂ ಹೇಳಿದೆ.
ಚುನಾವಣಾ ಕಾರ್ಯಸೂಚಿ ಅಥವಾ ಸಂಕುಚಿತ ರಾಜಕೀಯ ಲಾಭಕ್ಕಾಗಿ ಖತರ್ ನ ಹೆಸರನ್ನು ಬಳಸಿಕೊಳ್ಳುವ ಪ್ರಯತ್ನಗಳನ್ನು ಮೌನವಾಗಿ ಸಹಿಸುವುದಿಲ್ಲ ಎಂದು ಅಲ್-ಅನ್ಸಾರಿ ಎಚ್ಚರಿಸಿದ್ದಾರೆ.


