ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀಕೋವಿಲ್ ಮುಂಭಾಗದಲ್ಲಿರುವ ದ್ವಾರಪಾಲಕ ಶಿಲ್ಪಗಳಿಗೆ 1998ರಲ್ಲಿ ಚಿನ್ನದ ಲೇಪನ ಮಾಡಲಾಗಿದ್ದ ತಾಮ್ರದ ಫಲಕಗಳನ್ನು 2019ರಲ್ಲಿ ಬದಲಾಯಿಸಿಲ್ಲ ಎಂಬ ಸುಳಿವು ಲಭ್ಯವಾಗಿದೆ. ಬದಲಾಗಿ, ಅವುಗಳ ಮೇಲಿದ್ದ ಚಿನ್ನವನ್ನು ತೆಗೆದು ಕದ್ದ ಬಳಿಕ ಕಡಿಮೆ ಪ್ರಮಾಣದ ಹೊಸ ಚಿನ್ನದ ಲೇಪನ ಮಾಡಿ ಮರಳಿ ಅಳವಡಿಸಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಆರಂಭದಲ್ಲಿ ಮೂಲ ಫಲಕಗಳನ್ನು ಬೇರೆಡೆಗೆ ಸಾಗಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಜಮ್‌ಶೆಡ್‌ಪುರದ ರಾಷ್ಟ್ರೀಯ ಲೋಹಶಾಸ್ತ್ರ ಪ್ರಯೋಗಾಲಯದ ಅಂತಿಮ ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
1998ರಲ್ಲಿ ಯುಬಿ ಗ್ರೂಪ್‌ನ ಅಧ್ಯಕ್ಷ ವಿಜಯ್ ಮಲ್ಯ ಅವರು ನೀಡಿದ ಕಾಣಿಕೆಯ ರೂಪದಲ್ಲಿ ಶ್ರೀಕೋವಿಲ್ ಹಾಗೂ ದ್ವಾರಪಾಲಕ ಶಿಲ್ಪಗಳಿಗೆ ಚಿನ್ನದ ಲೇಪನ ಮಾಡಲಾಗಿತ್ತು. ಯುಬಿ ಗ್ರೂಪ್‌ನ ಲೆಕ್ಕಾಚಾರದ ಪ್ರಕಾರ, ಈ ಕಾರ್ಯಕ್ಕೆ ಒಟ್ಟು 30.291 ಕೆ.ಜಿ. ಚಿನ್ನ ಬಳಸಲಾಗಿತ್ತು. ಇದರಲ್ಲಿ 1.564 ಕೆ.ಜಿ. ಚಿನ್ನವನ್ನು ದ್ವಾರಪಾಲಕ ಶಿಲ್ಪಗಳಿಗೆ ಬಳಸಲಾಗಿತ್ತು.
2019ರ ಜುಲೈ 19ರಂದು ದ್ವಾರಪಾಲಕ ಶಿಲ್ಪಗಳಿಂದ ಒಟ್ಟು 25.4 ಕೆ.ಜಿ. ತೂಕದ 12 ಫಲಕಗಳನ್ನು ತೆಗೆದು, ಚಿನ್ನದ ಲೇಪನಕ್ಕಾಗಿ ಉಣ್ಣಿಕೃಷ್ಣನ್ ಪೋಟ್ಟಿ ಅವರಿಗೆ ಹಸ್ತಾಂತರಿಸಲಾಗಿತ್ತು. ದೇವಸ್ವಂ ಮಂಡಳಿಯ ಮಹಜರ್‌ನಲ್ಲಿ ಈ ಫಲಕಗಳನ್ನು ‘ತಾಮ್ರದ ಫಲಕಗಳು’ ಎಂದು ದಾಖಲಿಸಲಾಗಿತ್ತು.
ಬಳಿಕ, 2019ರ ಆಗಸ್ಟ್ 29ರಂದು ಚಿನ್ನದ ಲೇಪನಕ್ಕಾಗಿ ಫಲಕಗಳನ್ನು ಚೆನ್ನೈನ ಅಂಬತ್ತೂರಿನಲ್ಲಿರುವ ಸ್ಮಾರ್ಟ್ ಕ್ರಿಯೇಷನ್ಸ್ ಸಂಸ್ಥೆಗೆ ಕೊಂಡೊಯ್ಯಲಾಗಿತ್ತು.
ಫಲಕಗಳನ್ನು ತೆಗೆದಾಗ ಅವುಗಳ ಒಟ್ಟು ತೂಕ 42.8 ಕೆ.ಜಿ.ಯಷ್ಟಿತ್ತು. ಮರುಹಸ್ತಾಂತರಿಸಿದಾಗ ತೂಕ 38.258 ಕೆ.ಜಿ.ಗೆ ಇಳಿದಿತ್ತು. ಅಂದರೆ, ಒಟ್ಟು 4.541 ಕೆ.ಜಿ. ತೂಕದ ವ್ಯತ್ಯಾಸ ಕಂಡುಬಂದಿತ್ತು.
1998ರಲ್ಲಿ ಲೇಪನ ಮಾಡಲಾಗಿದ್ದ ಚಿನ್ನದ ಬಹುಪಾಲನ್ನು ತೆಗೆದು, ಅದರ ಬದಲಿಗೆ ತೆಳುವಾದ ಚಿನ್ನದ ಪದರವನ್ನು ಲೇಪಿಸಲಾಗಿದೆ ಎಂಬುದು ಪ್ರಯೋಗಾಲಯದ ಪ್ರಾಥಮಿಕ ಪರೀಕ್ಷೆಯಲ್ಲಿ ಸ್ಪಷ್ಟವಾಗಿತ್ತು. ಆದರೆ, ಎಷ್ಟು ಪ್ರಮಾಣದ ಚಿನ್ನವನ್ನು ತೆಗೆದುಹಾಕಲಾಗಿದೆ ಎಂಬ ನಿಖರ ಮಾಹಿತಿ ಅಂತಿಮ ವರದಿಯಿಂದ ತಿಳಿದುಬರಬೇಕಿದೆ.
ನವೆಂಬರ್‌ನಲ್ಲಿ ಆರೋಪಪಟ್ಟಿ ಸಲ್ಲಿಕೆ
ಶ್ರೀಕೋವಿಲ್‌ನ ಬಾಗಿಲಿನ ಚಿನ್ನದ ಫಲಕಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಕ್ಟೋಬರ್ 25ರೊಳಗೆ ಆರೋಪಪಟ್ಟಿ ಸಲ್ಲಿಸುವಂತೆ ಕೇರಳ ಹೈಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸೂಚಿಸಿದೆ. ದ್ವಾರಪಾಲಕ ಶಿಲ್ಪಗಳ ಪ್ರಕರಣದಲ್ಲಿ ನವೆಂಬರ್ 25ರೊಳಗೆ ಆರೋಪಪಟ್ಟಿ ಸಲ್ಲಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇವಸ್ವಂ ಮಂಡಳಿಯ ಮೂವರು ಮಾಜಿ ಅಧ್ಯಕ್ಷರು, ತಂತ್ರಿ ಕಂಠರ ರಾಜೀವರ್ ಸೇರಿದಂತೆ ದೇವಸ್ವಂ ಮಂಡಳಿಯ ಅಧಿಕಾರಿಗಳು ಸೇರಿ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.



