ತಿರುವನಂತಪುರಂ: ಕೇರಳದ ಬೇಕರಿಗಳ ಮೂಲಕ ಹಾರ್ಟಿ ವೈನ್ ಮಾರಾಟ ಮಾಡಲು ಅನುಮತಿ ನೀಡಿದ್ದ ವಿವಾದಾತ್ಮಕ ಆದೇಶವನ್ನು ರದ್ದುಪಡಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಸರ್ಕಾರದ ಅನುಮತಿ ಪಡೆಯದೆ ಈ ಆದೇಶ ಹೊರಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈ ವಿಷಯ ಬಹಿರಂಗವಾಗುತ್ತಿದ್ದಂತೆ ಅಬಕಾರಿ ಸಚಿವ ಎಂ. ಲಿಜು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಕರಣದ ಕುರಿತು ಅಬಕಾರಿ ಆಯುಕ್ತರಿಂದ ತುರ್ತು ವರದಿಯನ್ನೂ ಕೋರಿದ್ದರು. ಬೇಕರಿಗಳ ಮೂಲಕ ವೈನ್ ಮಾರಾಟ ಮಾಡುವ ನಿರ್ಧಾರದ ಬಗ್ಗೆ ಮಾಧ್ಯಮಗಳ ವರದಿಗಳಿಂದಲೇ ತಮಗೆ ಮಾಹಿತಿ ದೊರಕಿದೆ ಎಂದು ಸಚಿವರು ಈ ಹಿಂದೆ ಸ್ಪಷ್ಟಪಡಿಸಿದ್ದರು.
ಸರ್ಕಾರದ ಪೂರ್ವಾನುಮತಿ ಪಡೆಯದೆ ಇಂತಹ ಆದೇಶ ಹೊರಡಿಸಲಾಗಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಈ ಬೆಳವಣಿಗೆಯಿಂದ ಮುಖ್ಯಮಂತ್ರಿಯವರೂ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ವಿವಾದಾತ್ಮಕ ಆದೇಶಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕಾನೂನು ಪ್ರಕಾರವೇ ಆದೇಶ ಹೊರಡಿಸಲಾಗಿದೆ ಎಂಬ ಅಬಕಾರಿ ಇಲಾಖೆಯ ವಾದ
ಆದರೆ, ಕಾನೂನುಬದ್ಧ ನಿಯಮಗಳನ್ನು ಪಾಲಿಸಿಯೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಆಯುಕ್ತರ ಕಚೇರಿ ಸಮರ್ಥಿಸಿಕೊಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ಆಧಾರದ ಮೇಲೆ ಪ್ರಸ್ತುತ ಮಾರಾಟಕ್ಕೆ ಅನುಮತಿ ನೀಡುವ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲೇ ಹಾರ್ಟಿ ವೈನ್ ಮಾರಾಟಕ್ಕೆ ಪರವಾನಗಿ ನೀಡಲಾಗಿತ್ತು ಎನ್ನಲಾಗಿದೆ.
ವಾರ್ಷಿಕ ₹10,000 ಪರವಾನಗಿ ಶುಲ್ಕ
ಆದೇಶದ ಪ್ರಕಾರ, ಬೇಕರಿ ಸೇರಿದಂತೆ ಸಂಬಂಧಿತ ಸಂಸ್ಥೆಗಳು ವಾರ್ಷಿಕ ₹10,000 ಶುಲ್ಕ ಪಾವತಿಸಿ ಪರವಾನಗಿ ಪಡೆಯಬಹುದಾಗಿತ್ತು. ವೈನ್ ಮಾರಾಟದಿಂದ ಸಂಸ್ಥೆಗಳಿಗೆ ಶೇ.20ರಷ್ಟು ಕಮಿಷನ್ ದೊರೆಯುವ ವ್ಯವಸ್ಥೆಯನ್ನೂ ರೂಪಿಸಲಾಗಿತ್ತು.
ಹಾರ್ಟಿ ವೈನ್‌ಗೆ ಪ್ರಸ್ತುತ ಶೇ.86ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆ ಪ್ರಮಾಣ ತುಂಬಾ ಹೆಚ್ಚಾಗಿದೆ ಎಂದು ಆಕ್ಷೇಪಿಸಿರುವ ಉದ್ಯಮಿಗಳು, ತೆರಿಗೆ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸಾಮಾನ್ಯ ವ್ಯಾಪಾರ ಸಂಸ್ಥೆಗಳಾದ ಬೇಕರಿಗಳ ಮೂಲಕ ಮದ್ಯದ ವರ್ಗಕ್ಕೆ ಸೇರುವ ವೈನ್ ಮಾರಾಟ ಮಾಡಲು ಅವಕಾಶ ನೀಡುವುದರಿಂದ ಸಾಮಾಜಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗಬಹುದು ಎಂಬ ಆತಂಕವೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಮೂಡಿದೆ.



