ಅಮರಾವತಿ: ಇಂದು (ಬುಧವಾರ) ಬೆಳಿಗ್ಗೆ ಆಂಧ್ರಪ್ರದೇಶದ ಕರಾವಳಿಗೆ 'ಅರ್ನಬ್' ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮ ಪುರಿ, ಗಜಪತಿ, ಗಂಜಾಮ್, ರಾಯಗಢ, ಕೊರಾಪುಟ್ ಮತ್ತು ಮಾಲ್ಕಾನ್‌ನಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ವರದಿಯಾಗಿದೆ.
ಮಳೆ ಸಂಬಂಧಿತ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವ ಬಗ್ಗೆ ವರದಿಯಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿ ಮಂಗಳವಾರ ತಡರಾತ್ರಿ ಮರಬಿದ್ದ ಪರಿಣಾಮ 46 ವರ್ಷದ ಕಿಶೋರ್ ಕುಮಾರ್ ಎಂಬುವರು ಮೃತಪಟ್ಟಿದ್ದಾರೆ.
ಮತ್ತೊಂದೆಡೆ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಕೃಷಿ ಜಮೀನಿನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 53 ವರ್ಷದ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.
ಅಲ್ಲದೆ, ಅನಾಕಪಲ್ಲಿ ಜಿಲ್ಲೆಯ ಯಲಮಂಚಿಲಿ ಪಟ್ಟಣದಲ್ಲಿ ಮನೆಯ ಹೊರಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು 55 ವರ್ಷದ ಮಹಿಳೆಯೊಬ್ಬರು ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ಭೀಮಾವರಂನಲ್ಲಿ ದಿನಪತ್ರಿಕೆ ಹಂಚಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವಿದ್ಯುತ್ ಕಂಬ ಕುಸಿದುಬಿದ್ದು ರಾಂಬಾಬು ಎಂಬುವವರ (ಮೋಪೆಡ್) ಗಂಭೀರವಾಗಿ ಗಾಯಗೊಂಡಿದ್ದಾರೆ.


