ಟೆಹರಾನ್: ಸಮುದ್ರದಲ್ಲಿ ಮುಳುಗಿದ ಸರಕು ಹಡಗಿನಲ್ಲಿದ್ದ ಐಫೋನ್ ಗಳು, ಫ್ರೆಂಚ್ ಸುಗಂಧ ದ್ರವ್ಯಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಲು ಇರಾನ್ ನ ನೂರಾರು ಮೀನುಗಾರರು ದೋಣಿಗಳಲ್ಲಿ ಧಾವಿಸಿರುವ ಘಟನೆ ನಡೆದಿದೆ. ಸಮುದ್ರದಲ್ಲಿ ಭಾಗಶಃ ಮುಳುಗಿರುವ ಕಂಟೇನರ್ ಗಳ ನಡುವೆ ದೋಣಿಗಳನ್ನು ಚಲಾಯಿಸುತ್ತಾ, ನೀರಿನಿಂದ ಪೆಟ್ಟಿಗೆಗಳನ್ನು ಹೊರತೆಗೆಯಲು ಅವರು ಪ್ರಯತ್ನಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಕ್ಟೋಬರ್ 14ರಂದು 'ಜಿಎಫ್ಎಸ್ ಪ್ರೈಡ್' ಸರಕು ಹಡಗು ಮುಳುಗಿದ ಬಳಿಕ ಈ ಬೆಳವಣಿಗೆ ನಡೆದಿದೆ. ಹಡಗಿನಲ್ಲಿ 2,500ಕ್ಕೂ ಹೆಚ್ಚು ಕಂಟೇನರ್ ಗಳಿದ್ದವು. ಹಡಗು ಮುಳುಗಿದ ಸುದ್ದಿ ತಿಳಿಯುತ್ತಿದ್ದಂತೆ ಇರಾನ್ ನ ಗಲ್ಫ್ ಕರಾವಳಿಯ ಮೀನುಗಾರರು ಸಣ್ಣ ಮೀನುಗಾರಿಕಾ ದೋಣಿಗಳು ಹಾಗೂ ಇತರ ಹಡಗುಗಳಲ್ಲಿ ಸಮುದ್ರಕ್ಕೆ ತೆರಳಿದ್ದಾರೆ.
'ಕಂಟೇನರ್ ಹಡಗು ಮುಳುಗುತ್ತಿರುವುದನ್ನು ಕೇಳಿದ್ದೇವೆ. ಹೀಗಾಗಿ ಐಫೋನ್ ಗಳು ಮತ್ತು ಸುಗಂಧ ದ್ರವ್ಯಗಳನ್ನು ಸಂಗ್ರಹಿಸಲು ಹಾರ್ಮುಝ್ ಜಲಸಂಧಿಯ ಕಡೆಗೆ ತೆರಳುತ್ತಿದ್ದೇವೆ' ಎಂದು ವ್ಯಕ್ತಿಯೊಬ್ಬರು ವೀಡಿಯೊದಲ್ಲಿ ಹೇಳಿದ್ದಾರೆ.
ಪ್ರದೇಶದ ದೃಶ್ಯಗಳಲ್ಲಿ ದೋಣಿಗಳು ಭಾಗಶಃ ಮುಳುಗಿದ ಕಂಟೇನರ್ ಗಳ ನಡುವೆ ಸಂಚರಿಸುತ್ತಿರುವುದು ಕಂಡುಬಂದಿದೆ. ಕೆಲವರು ನೀರಿನಿಂದ ಪೆಟ್ಟಿಗೆಗಳನ್ನು ಹೊರತೆಗೆಯಲು ಪ್ರಯತ್ನಿಸಿದರೆ, ಮತ್ತೊಂದು ದೃಶ್ಯದಲ್ಲಿ ಸಣ್ಣ ದೋಣಿಯೊಂದು ಸಂಪೂರ್ಣ ಸರಕು ಕಂಟೇನರ್ ಅನ್ನು ಎಳೆಯಲು ಹರಸಾಹಸ ಪಡುತ್ತಿರುವುದು ಕಾಣಿಸಿದೆ.
►ಸಮುದ್ರದ ಗಣಿಗೆ ಡಿಕ್ಕಿ ಹೊಡೆದ ಹಡಗು? :
ಸಿಂಗಪುರದ ಧ್ವಜದಡಿ ಸಂಚರಿಸುತ್ತಿದ್ದ ಜಿಎಫ್ಎಸ್ ಪ್ರೈಡ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಅದು ಮುಳುಗಿದೆ ಎಂದು ವರದಿಯಾಗಿದೆ. ಹಡಗಿನಲ್ಲಿದ್ದ ಎಲ್ಲ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಲಾಗಿದೆ.
ಆದರೆ, ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಹಡಗು 'ಅನಧಿಕೃತ ಮತ್ತು ಅಪಾಯಕಾರಿ' ಮಾರ್ಗದಲ್ಲಿ ಸಂಚರಿಸುತ್ತಿದ್ದಾಗ ಸಮುದ್ರದ ಗಣಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ.
ಹಾರ್ಮುಝ್ ಜಲಸಂಧಿ ಹಾಗೂ ಸುತ್ತಮುತ್ತಲಿನ ಸಮುದ್ರ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಫೆಬ್ರುವರಿ ಅಂತ್ಯದಲ್ಲಿ ಯುದ್ಧ ಆರಂಭವಾದ ಬಳಿಕ IRGC ದಾಳಿಗಳ ತೀವ್ರತೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ ಮುಳುಗಿದ ಎರಡನೇ ಹಡಗು ಜಿಎಫ್ಎಸ್ ಪ್ರೈಡ್ ಆಗಿದ್ದು, ಯುದ್ಧ ಆರಂಭವಾದ ಬಳಿಕ ಮುಳುಗಿದ ಮೂರನೇ ಹಡಗು ಇದಾಗಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 23ರಂದು ನಡೆದ ದಾಳಿಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಧ್ವಜದಡಿ ಸಂಚರಿಸುತ್ತಿದ್ದ 'ಕೇಪ್ ಡಾವೊ' ಹಡಗು ಮುಳುಗಿತ್ತು.
ಸಮುದ್ರದಲ್ಲಿ ತೇಲುತ್ತಿರುವ ಕಂಟೇನರ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸ್ಥಳೀಯ ಮೀನುಗಾರರಿಗೆ IRGC ನೌಕಾಪಡೆ ಸೂಚಿಸಿದೆ. ಈ ಪ್ರದೇಶದಿಂದ ದೂರವಿರುವಂತೆ ಇತರ ಹಡಗುಗಳಿಗೂ ಎಚ್ಚರಿಕೆ ನೀಡಿದೆ.
►ಹಾರ್ಮುಝ್ ಜಲಸಂಧಿ ತೆರೆಯಲು ಅಮೆರಿಕದ ಪಡೆಗಳ ವಾಪಸಾತಿಗೆ ಇರಾನ್ ಪಟ್ಟು :
ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯಬೇಕಾದರೆ ಅಮೆರಿಕದ ಪಡೆಗಳು ಈ ಪ್ರದೇಶದಿಂದ ವಾಪಸಾಗಬೇಕು ಎಂದು ಇರಾನ್ ಹೇಳಿದೆ. ಶುಕ್ರವಾರ ಮಾತನಾಡಿದ ಇರಾನ್ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಅಕ್ರಮಿನಿಯಾ, ಅಮೆರಿಕದ ಪಡೆಗಳು ಈ ಪ್ರದೇಶದಲ್ಲೇ ಉಳಿದರೆ ಅವುಗಳನ್ನು ಹೊರಹಾಕುವುದಾಗಿ ಎಚ್ಚರಿಸಿದ್ದಾರೆ.
'ಅಮೆರಿಕ ಈ ಪ್ರದೇಶವನ್ನು ತೊರೆದರೆ ಹಾರ್ಮುಝ್ ಜಲಸಂಧಿ ತೆರೆಯಲಿದೆ. ಪ್ರಾದೇಶಿಕ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಸಾಮೂಹಿಕ ಭದ್ರತೆ ಸ್ಥಾಪನೆಯಾಗಲಿದ್ದು, ಜಾಗತಿಕ ಆರ್ಥಿಕತೆ ಸುಧಾರಿಸಲಿದೆ. ಅಮೆರಿಕ ಹೊರಹೋಗದಿದ್ದರೆ ನಾವು ಅದನ್ನು ಹೊರಹಾಕುತ್ತೇವೆ' ಎಂದು ಅವರು ಹೇಳಿದ್ದಾರೆ.
ಜಲಸಂಧಿಯ ಪೂರ್ವ ಭಾಗದ ಸಮುದ್ರ ಪ್ರದೇಶದಲ್ಲಿ ಅಭದ್ರತೆ ಉಂಟಾಗಲು ವಾಷಿಂಗ್ಟನ್ ಕಾರಣ ಎಂದು ಅಕ್ರಮಿನಿಯಾ ಆರೋಪಿಸಿದ್ದಾರೆ. ಇರಾನ್ ನ ಸಶಸ್ತ್ರ ಪಡೆಗಳು ಸೂಚಿಸಿರುವ ಸಮುದ್ರ ಮಾರ್ಗವನ್ನು ಬಳಸುವಂತೆ ಹಡಗು ಮಾಲೀಕರಿಗೆ ಒತ್ತಾಯಿಸಿರುವ ಅವರು, ಆ ಮಾರ್ಗದಲ್ಲಿ ಸಂಚರಿಸುವ ಹಡಗುಗಳು ಸುರಕ್ಷಿತವಾಗಿರಲಿವೆ ಎಂದು ಹೇಳಿದ್ದಾರೆ.


