ಕುಂಬಳೆ: ಮನಸ್ವಿನಿ ಮಹಿಳಾ ವೇದಿಕೆಯ ಆಶ್ರಯದಲ್ಲಿ 'ಮನೆ-ಮನೆ ಅಭಿಯಾನ'ದ ಈ ತಿಂಗಳ ಕಾರ್ಯಕ್ರಮ ಭಾನುವಾರ ನಾರಾಯಣಮಂಗಲದ ಶ್ರೀನಿಧಿ ನಿಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಹಿರಿಯ ಶಿಕ್ಷಣ ತಜ್ಞ, ಸಾಹಿತಿ ವಿ. ಬಿ. ಕುಳಮರ್ವ ಅವರು, "ಮನೆಯಂಗಳದಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯುವುದು ಸಂಸ್ಕøತಿಯ ಬೆಳವಣಿಗೆಗೆ ಪೂರಕ. ಮಹಿಳೆಯರ ಸೃಜನಶೀಲ ಅಭಿವ್ಯಕ್ತಿಗೆ ಇಂತಹ ವೇದಿಕೆಗಳು ಹೊಸ ಹುರುಪು ನೀಡುತ್ತವೆ," ಎಂದು ನುಡಿದರು. ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ಉಪಸ್ಥಿತರಿದ್ದರು.
ಮುಖ್ಯ ಅತಿಥಿ, ಕಾದಂಬರಿಕಾರೆ ಪ್ರಸನ್ನ ವಿ. ಚೆಕ್ಕೆಮನೆ ಮಾತನಾಡಿ, "ದೈನಂದಿನ ಬದುಕಿನ ಜಂಜಾಟಗಳ ನಡುವೆಯೂ ಮಹಿಳೆಯರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅವರ ಅಂತರಂಗದ ಶಕ್ತಿಯನ್ನು ಅನಾವರಣಗೊಳಿಸುತ್ತದೆ. ಅಡುಗೆ ಮನೆಯನ್ನು ಬಂಧನವೆಂದು ಪರಿಭಾವಿಸದೆ ಅದರೊಳಗಿಂದ ಸೃಜನಾತ್ಮಕ ಅಕ್ಷರಗಳನ್ನು ಪೋಣಿಸಬಹುದೆಂದು," ಅವರು ತಿಳಿಸಿದರು.
ಬಳಿಕ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕಥೆಗಾರ್ತಿ ಸ್ನೇಹಲತಾ ದಿವಾಕರ್ ಅವರು, "ನಮ್ಮ ಸುತ್ತಮುತ್ತಲಿನ ಸೂಕ್ಷ್ಮ ಸಂವೇದನೆಗಳೇ ಕಥೆಗಳಾಗಿ ರೂಪುಗೊಳ್ಳುತ್ತವೆ. ನಿರಂತರ ಓದು ಮತ್ತು ಬರವಣಿಗೆಯಿಂದ ಸೃಜನಶೀಲತೆ ಇನ್ನಷ್ಟು ಗಟ್ಟಿಯಾಗುತ್ತದೆ," ಎಂದು ಕಿವಿಮಾತು ಹೇಳಿದರು.
ಗೋಷ್ಠಿಯಲ್ಲಿ ಸತ್ಯವತಿ ಭಟ್ ಕೊಳಚ್ಚಪ್ಪು, ಪಾರ್ವತಿ ಕುಳಕೋಡ್ಲು, ಧನ್ಯಶ್ರೀ ಸರಳಿ, ಸುಮಿತ್ರ ಎರ್ಪಕಟ್ಟೆ, ಸರ್ವಮಂಗಳಾ ಪುಣಿಚಿತ್ತಾಯ, ಅನುಪಮಾ ರಾಘವೇಂದ್ರ ಉಡುಪಮೂಲೆ, ಪ್ರಭಾವತಿ ಕೆದಿಲಾಯ ಕಥೆ ವಾಚಿಸಿದರು. ಸುಶೀಲಾ ಪದ್ಯಾಣ, ಲಕ್ಷ್ಮೀ ವಿ. ಭಟ್, ಜ್ಯೋತ್ಸ್ನಾ ಎಂ. ಕಡಂದೇಲು ಹಾಗೂ ಪ್ರಮೀಳಾ ಚುಳ್ಳಿಕ್ಕಾನ ನೇತೃತ್ವ ವಹಿಸಿದ್ದರು.

.jpg)
.jpg)
