ನವದೆಹಲಿ: 8.5 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿರುವ ದಿಲ್ಲಿಯಲ್ಲಿರುವ 135 ವರ್ಷಗಳಷ್ಟು ಹಳೆಯ ಕೇಂದ್ರ ಸರಕಾರದ ಸಚಿವಾಲಯ ಗ್ರಂಥಾಲಯವನ್ನು ಸ್ಥಳಾಂತರಿಸುವ ಪ್ರಸ್ತಾವದ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿದೆ.
ನೂತನ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ಈ ಗ್ರಂಥಾಲಯಕ್ಕೆ ಯಾವುದೇ ಸ್ಥಳ ನೀಡಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕ್ರಮ ಕೈಗೊಂಡಿದೆ. ಈ ಪ್ರಕರಣದ ವಿಚಾರಣೆ ಅ.5ರಂದು ನಡೆಯಲಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ್ ಅವರನ್ನೊಳಗೊಂಡ ಪೀಠ ಕೇಂದ್ರ ಸರಕಾರಕ್ಕೆ ನೋಟಿಸ್ ನೀಡಿದೆ. ಗ್ರಂಥಾಲಯಕ್ಕೆ ಹಂಚಿಕೆಯಾಗಲಿರುವ ಸ್ಥಳದ ಪೂರ್ಣ ವಿವರಗಳು ಹಾಗೂ ಅದರ ಪ್ರಸಕ್ತ ವಿನ್ಯಾಸದ ಯೋಜನೆಯನ್ನು ಒಳಗೊಂಡ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದೆ.
ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಹಾಜರಾಗಿದ್ದರು.
135 ವರ್ಷಗಳಷ್ಟು ಹಳೆಯದಾದ ಗ್ರಂಥಾಲಯ, 8.5 ಲಕ್ಷ ಪುಸ್ತಕಗಳು ಮತ್ತು ಹೊಸ ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಜಾಗವಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
1969ರಿಂದ ಶಾಸ್ತ್ರಿ ಭವನದ ನಾಲ್ಕು ಮಹಡಿಗಳಲ್ಲಿ ಹರಡಿದ್ದ ಈ ಗ್ರಂಥಾಲಯಕ್ಕೆ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕರ್ತವ್ಯ ಭವನ-2ರ ಸಂಕೀರ್ಣದಲ್ಲಿ ಕೇವಲ ಎರಡು ಕೊಠಡಿಗಳನ್ನು ಮಾತ್ರ ಹಂಚಿಕೆ ಮಾಡಿದೆ. ಇದರಿಂದ ಗ್ರಂಥಾಲಯದ ಭವಿಷ್ಯ ಅನಿಶ್ಚಿತತೆಯಲ್ಲಿದೆ ಎಂದು ಇತ್ತೀಚೆಗಿನ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಸಂಟ್ರಲ್ ವಿಸ್ಟಾ ಮರು ಅಭಿವೃದ್ಧಿ ಯೋಜನೆಯಲ್ಲಿ ಗ್ರಂಥಾಲಯಕ್ಕೆ ಸ್ಥಳಾವಕಾಶ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.

