HEALTH TIPS

ಮಾಜಿ CJI ಚಂದ್ರಚೂಡ್ ಸರ್ಕಾರದ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಅಧೀನರಾಗಿ ನಡೆದುಕೊಂಡರು: ನ್ಯಾ. ಸಂಜಯ್ ಕಿಶನ್ ಕೌಲ್

ನವದೆಹಲಿ: ನ್ಯಾಯಾಂಗದ ನೇಮಕಾತಿ ವಿಷಯಗಳಲ್ಲಿ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸರ್ಕಾರಕ್ಕೆ ಅಗತ್ಯಕ್ಕಿಂತ ಹೆಚ್ಚು ಗೌರವ ನೀಡುತ್ತಿದ್ದರು ಮತ್ತು ಪಿಎಂಎಲ್‌ಎ ನಿಬಂಧನೆಗಳ ಸಿಂಧುತ್ವವನ್ನು ಮರುಪರಿಶೀಲಿಸುವಂತೆ ಕೋರಿರುವ ಅರ್ಜಿಗಳ ವಿಚಾರಣೆ ನಡೆಸದಂತೆ ತಮ್ಮನ್ನು ತಡೆಯಲಾಯಿತು ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ತಮ್ಮ ಮುಂಬರುವ ಪುಸ್ತಕ 'ವಿತೌಟ್ ಫಿಯರ್ ಆರ್ ಫೇವರ್'ನಲ್ಲಿ ಹೇಳಿದ್ದಾರೆ.


ನ್ಯಾಯಮೂರ್ತಿ ಚಂದ್ರಚೂಡ್ ಅವರು ಸರ್ಕಾರದ ಒತ್ತಡಕ್ಕೆ ಮಣಿದು ನ್ಯಾಯಾಧೀಶರ ನೇಮಕಾತಿಗಾಗಿ ಎಸ್‌ಸಿ ಕೊಲಿಜಿಯಂನ ನಿರ್ಣಯಗಳ ಅನುಷ್ಠಾನದಲ್ಲಿನ ವಿಳಂಬವನ್ನು ಪ್ರಶ್ನಿಸಿದ್ದ ಪ್ರಕರಣವನ್ನು ತಮ್ಮಿಂದ ಹಿಂತೆಗೆದುಕೊಂಡರು. ಈ ಪ್ರಕರಣವನ್ನು ವರ್ಷಗಳ ಹಿಂದೆಯೇ ತಮ್ಮ ನೇತೃತ್ವದ ಪೀಠಕ್ಕೆ ವಹಿಸಲಾಗಿತ್ತು ಮತ್ತು ಇದ್ದಕ್ಕಿದ್ದಂತೆ ಅದನ್ನು ಕೈಬಿಡಲಾಯಿತು. ಇದು 'ನನಗೆ ಹೆಚ್ಚು ತೊಂದರೆ ನೀಡಿತು' ಎಂದು ಅವರು ಹೇಳಿದರು.

ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್, 'ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರ ನೇಮಕಾತಿ ಕುರಿತಾದ ಚರ್ಚೆಗಳ ಸಂದರ್ಭದಲ್ಲಿ, ಕೊಲಿಜಿಯಂನ ಯಾವುದೇ ಸದಸ್ಯರು ಯಾವುದೇ ಹೆಸರಿನ ಬಗ್ಗೆ ಎಂದಿಗೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರಲಿಲ್ಲ' ಎಂದು ಹೇಳಿದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕಾತಿ ಮಾಡುವ ಸಂಬಂಧ ಕೊಲಿಜಿಯಂ ಅಂಗೀಕರಿಸಿದ ನಿರ್ಣಯಗಳು ಸರ್ವಾನುಮತದಿಂದ ಕೂಡಿದ್ದವು ಮತ್ತು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಕೊಲಿಜಿಯಂನ ಎಲ್ಲ ಸದಸ್ಯರು ಅವುಗಳಿಗೆ ಸಹಿ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ, ನ್ಯಾಯಮೂರ್ತಿಗಳಾದ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠವು, ಕೊಲಿಜಿಯಂ ಕಳುಹಿಸಿದ ಹೆಸರುಗಳನ್ನು ತೆರವುಗೊಳಿಸುವಲ್ಲಿ ಅನುಸರಿಸುತ್ತಿರುವ ನೀತಿ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ನವೆಂಬರ್ 20, 2023 ರಂದು, ಕೊಲಿಜಿಯಂ ಶಿಫಾರಸು ಮಾಡಿದಂತೆ ಕೇಂದ್ರವು ಗುಜರಾತ್ ಹೈಕೋರ್ಟ್‌ನಿಂದ ನಾಲ್ವರು ನ್ಯಾಯಾಧೀಶರನ್ನು ಏಕೆ ವರ್ಗಾಯಿಸುತ್ತಿಲ್ಲ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ಇಬ್ಬರು ಸಿಖ್ ವಕೀಲರನ್ನು ಏಕೆ ನೇಮಿಸುತ್ತಿಲ್ಲ ಎಂದು ಕೇಳಿತ್ತು. ನಂತರ ಪ್ರಕರಣವನ್ನು ಅವರ ಪೀಠದಿಂದ ತೆಗೆದುಹಾಕಲಾಯಿತು ಮತ್ತು ಕಳೆದ ಮೂರು ವರ್ಷಗಳಿಂದ ಅದನ್ನು ವಿಚಾರಣೆಗೆ ಪಟ್ಟಿ ಮಾಡಿಲ್ಲ.

'ದಿ ವೈರ್' ಜೊತೆಗಿನ ಸಂದರ್ಶದನಲ್ಲಿ ಕರಣ್ ಥಾಪರ್ ಅವರೊಂದಿಗೆ ಮಾತನಾಡಿರುವ ನ್ಯಾಯಮೂರ್ತಿ ಕೌಲ್, ಕೊಲಿಜಿಯಂ ಸಭೆಯೊಂದರ ವೇಳೆ ಆಗಿನ ಮುಖ್ಯ ನ್ಯಾಯಮೂರ್ತಿಗಳು (CJI) ತಮ್ಮನ್ನು ಪಕ್ಕಕ್ಕೆ ಕರೆದೊಯ್ದು, ಪ್ರಸ್ತಾವಿತ ನೇಮಕಾತಿಗಳ ಕುರಿತು ಅಭಿಪ್ರಾಯವನ್ನು ತಿಳಿದುಕೊಳ್ಳಲು ಸರ್ಕಾರಕ್ಕೆ ದೂರವಾಣಿ ಕರೆ ಮಾಡಬೇಕೇ ಎಂದು ಕೇಳಿದರು. ಆದರೆ, ಕೊಲಿಜಿಯಂನಲ್ಲಿ ಚರ್ಚೆ ನಡೆಯುವ ಮೊದಲೇ ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ವಿಷಯವು ಕಳವಳಕಾರಿ ಸಂಗತಿ ಎಂದು ಹೇಳಿದ್ದಾರೆ.

'ದುರದೃಷ್ಟವಶಾತ್, ಹೆಸರುಗಳ ಬಗ್ಗೆ ಚರ್ಚಿಸುವುದು ಮತ್ತು ಸರ್ಕಾರದೊಂದಿಗೆ ಮೊದಲೇ ಒಂದು ರೀತಿಯ ಸಮಾಲೋಚನೆ ನಡೆಸುವುದು ಒಂದು ಪದ್ಧತಿಯಾಗಿಬಿಟ್ಟಿದೆ. ಹೀಗೆ ನಡೆಯುತ್ತಾ ಬಂದಿದೆ; ಮುಖ್ಯ ನ್ಯಾಯಮೂರ್ತಿ (CJI) ಚಂದ್ರಚೂಡ್ ಅವರ ಅವಧಿಗೆ ಮೊದಲು ಮತ್ತು ನಂತರವೂ ಇದು ಮುಂದುವರಿದಿದೆ. ಇದೇ ನನಗೆ ಕಳವಳ ಉಂಟುಮಾಡುತ್ತದೆ. ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಅದು ಕೊಲಿಜಿಯಂ ನಿರ್ಧಾರ ಕೈಗೊಂಡ ನಂತರವೇ ನಡೆಯಬೇಕೇ ಹೊರತು, ಅದಕ್ಕೂ ಮುನ್ನವಲ್ಲ' ಎಂದು ಸ್ಪಷ್ಟಪಡಿಸಿದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸರ್ಕಾರದ ವಿಷಯದಲ್ಲಿ ಅತಿಯಾದ ಗೌರವ ಅಥವಾ ಮಣಿಯುವ ಪ್ರವೃತ್ತಿಯನ್ನು ತೋರಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿ ಕೌಲ್, 'ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಾಂಗ ಮತ್ತು ಆಡಳಿತಾತ್ಮಕ ಎಂಬ ಎರಡು ಮುಖಗಳಿರುತ್ತವೆ. ನ್ಯಾಯಾಂಗದ ವಿಷಯಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆ ಜವಾಬ್ದಾರಿಯನ್ನು ನಿಭಾಯಿಸಲು ಬೇಕಾದ ಬೌದ್ಧಿಕ ಸಾಮರ್ಥ್ಯ, ದಕ್ಷತೆ ಮತ್ತು ಕಠಿಣ ಪರಿಶ್ರಮ ಅವರಲ್ಲಿತ್ತು ಎಂದು ನಾನು ನಂಬುತ್ತೇನೆ. ಆದರೆ, ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವಾಗ ಮತ್ತು ಸಹಕರಿಸುವಾಗ, ಆ ಪ್ರಕ್ರಿಯೆಯನ್ನು ಮುಂದುವರಿಸಲು ಅವರು ಅಗತ್ಯಕ್ಕಿಂತ ಹೆಚ್ಚು ಮಣಿಯುವ ಪ್ರವೃತ್ತಿಯನ್ನು ತೋರಿದರು ಎಂದು ನನಗೆ ಅನ್ನಿಸಿತು' ಎಂದು ಹೇಳಿದರು.

ನ್ಯಾಯಮೂರ್ತಿ ಚಂದ್ರಚೂಡ್ ಅವರು ಸರ್ಕಾರದೊಂದಿಗೆ ಎಲ್ಲವನ್ನೂ ಮೊದಲೇ ಚರ್ಚಿಸುವುದರಿಂದ ಅದು ತನ್ನದೇ ಆದ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಮೊದಲೇ ಅವರನ್ನು ಎಚ್ಚರಿಸಲು ನಾನು ಪ್ರಯತ್ನಿಸಿದೆ ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು. ನ್ಯಾಯಮೂರ್ತಿ ಚಂದ್ರಚೂಡ್ ಅವರು ನಿರೀಕ್ಷೆಗಳನ್ನು ಪೂರೈಸಲು ವಿಫಲರಾಗಿದ್ದಾರೆಯೇ ಎಂದು ಕೇಳಿದಾಗ, ನ್ಯಾಯಮೂರ್ತಿ ಕೌಲ್, 'ಅವರಿಂದ ನಿರೀಕ್ಷೆಗಳು ಹೆಚ್ಚಿದ್ದವು ಎಂದು ನಾನು ಹೇಳುತ್ತೇನೆ' ಎಂದು ಹೇಳಿದರು. 






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries