HEALTH TIPS

'Mann Ki Baat'ನ 12 ವರ್ಷಗಳ ಪಯಣ ತೀರ್ಥಯಾತ್ರೆಗೆ ಸಮ; ಜನರ ಕೊಡುಗೆ ಗುರುತಿಸಿ ಗೌರವಿಸಲು ಅವಕಾಶ ಸಿಕ್ಕಿದೆ: ಪ್ರಧಾನಿ ಮೋದಿ

ನವದೆಹಲಿ: ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 12 ವರ್ಷಗಳ ಪಯಣವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ 'ತೀರ್ಥಯಾತ್ರೆ'ಗೆ ಹೋಲಿಸಿದ್ದಾರೆ. ಈ ಕಾರ್ಯಕ್ರಮವು ದೇಶದ ನಾಗರಿಕರ ಪ್ರಯತ್ನಗಳನ್ನು ಹತ್ತಿರದಿಂದ ಅರಿತುಕೊಳ್ಳಲು ಹಾಗೂ ಅವರ ಕೊಡುಗೆಗಳನ್ನು ಗುರುತಿಸಿ ಗೌರವಿಸಲು ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.


'ಮನ್ ಕಿ ಬಾತ್' ಕಾರ್ಯಕ್ರಮದ 139ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮದ ಮೂಲಕ ತಾವು ಒಂದು ರೀತಿಯಲ್ಲಿ ರಾಷ್ಟ್ರದ ಸಾಮೂಹಿಕ ಶಕ್ತಿಯಾದ 'ಲೋಕಶಕ್ತಿ'ಯನ್ನು ಆರಾಧಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ದೇಶದ ಪ್ರತಿಯೊಂದು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಈ ಕಾರ್ಯಕ್ರಮ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಮತ್ತೊಮ್ಮೆ ನಿಮಗೆಲ್ಲರಿಗೂ ಸ್ವಾಗತ. ಹನ್ನೆರಡು ವರ್ಷಗಳ ಹಿಂದೆ ಇದೇ ದಿನ ವಿಜಯದಶಮಿಯ ಶುಭ ಸಂದರ್ಭದಲ್ಲಿ ನಾವು ಮನ್ ಕಿ ಬಾತ್ ಕಾರ್ಯಕ್ರಮವನ್ನು ಆರಂಭಿಸಿದ್ದೆವು. ಅಂದಿನಿಂದ ನಮ್ಮ ಈ ಪಯಣ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸಾಗುತ್ತಿದೆ. ಈ ಪಯಣದಲ್ಲಿ ನೀವೆಲ್ಲರೂ ಸಹಪ್ರಯಾಣಿಕರೂ ಹೌದು, ಮಾರ್ಗದರ್ಶಕರೂ ಹೌದು ಎಂದು ಪ್ರಧಾನಿ ಹೇಳಿದ್ದಾರೆ.

ದೇಶದ ಸಾಮಾನ್ಯ ಜನರ ಕಠಿಣ ಪರಿಶ್ರಮ, ಶೌರ್ಯ, ಬದ್ಧತೆ, ಸಮರ್ಪಣಾ ಮನೋಭಾವ ಹಾಗೂ ಸೇವಾ ಮನೋಭಾವವನ್ನು ಕೊಂಡಾಡಲು 'ಮನ್ ಕಿ ಬಾತ್' ಕಾರ್ಯಕ್ರಮವು ತಮಗೆ ದೊರೆತ ಪುಣ್ಯಾವಕಾಶವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ತೀರ್ಥಯಾತ್ರೆಯ ಪರಂಪರೆಯಿದೆ. ನನ್ನ ಪಾಲಿಗೆ 'ಮನ್ ಕಿ ಬಾತ್' ಕೂಡ ತೀರ್ಥಯಾತ್ರೆಗಿಂತ ಕಡಿಮೆಯೇನಲ್ಲ. ದೇಶದ ಜನರ ಪ್ರಯತ್ನಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ಹಾಗೂ ಅವರ ಕೊಡುಗೆಗಳಿಗೆ ಶಿರಬಾಗಿ ನಮಿಸಲು ಈ ಕಾರ್ಯಕ್ರಮ ಅವಕಾಶ ಕಲ್ಪಿಸಿದೆ ಎಂದು ಹೇಳಿದ್ದಾರೆ.

ಸಮಾಜ ಮತ್ತು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ವ್ಯಕ್ತಿಗಳು ಸ್ವತಃ ತೀರ್ಥಕ್ಷೇತ್ರಗಳಿದ್ದಂತೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ 12 ವರ್ಷಗಳಲ್ಲಿ ದೇಶದ ಮೂಲೆಮೂಲೆಗಳಿಂದ ಇಂತಹ ಅನೇಕ ವ್ಯಕ್ತಿಗಳು ಮುನ್ನೆಲೆಗೆ ಬಂದಿದ್ದಾರೆ. ಅವರ ಅಸಾಧಾರಣ ಕಾರ್ಯಗಳು ಸಾಮಾನ್ಯವಾಗಿ ಸಮಾಜದ ಗಮನಕ್ಕೆ ಬರುವುದಿಲ್ಲ. ಅಂತಹವರ ಸಾಧನೆಗಳನ್ನು ಗುರುತಿಸಿ ಜನರಿಗೆ ಪರಿಚಯಿಸುವ ಕೆಲಸವನ್ನು 'ಮನ್ ಕಿ ಬಾತ್' ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಅಸಂಖ್ಯಾತ ಸ್ಫೂರ್ತಿದಾಯಕ ಕಥೆಗಳನ್ನು ನಿಮ್ಮೆಲ್ಲರ ಮುಂದೆ ತರುವ ಕೆಲಸವನ್ನು ಮನ್ ಕಿ ಬಾತ್ ಮಾಡಿದೆ. ಈ ಕಾರ್ಯಕ್ರಮದ ಮೂಲಕ ನಾನು ಒಂದು ರೀತಿಯಲ್ಲಿ ರಾಷ್ಟ್ರದ ಸಾಮೂಹಿಕ ಶಕ್ತಿಯಾದ ಲೋಕಶಕ್ತಿಯನ್ನು ಆರಾಧಿಸುತ್ತೇನೆ. ದೇಶದ ಪ್ರತಿಯೊಂದು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಇದು ನನಗೆ ಅವಕಾಶ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.

'ಮನ್ ಕಿ ಬಾತ್' ಕಾರ್ಯಕ್ರಮವನ್ನು ಆಲಿಸಿದ ನಂತರ, ಪ್ರಧಾನಿ ಮೋದಿ ತಮ್ಮ ಕುಟುಂಬದ ಸದಸ್ಯರೊಬ್ಬರಂತೆ ತಮ್ಮ ನಡುವೆಯೇ ಕುಳಿತು ಮಾತನಾಡುತ್ತಿರುವ ಅನುಭವವಾಯಿತು ಎಂದು ಅನೇಕರು ಸಂದೇಶಗಳನ್ನು ಕಳುಹಿಸುತ್ತಾರೆ. ಇಂತಹ ನೂರಾರು ಸಂದೇಶಗಳು ತಮಗೆ ಬರುತ್ತವೆ ಎಂದು ಪ್ರಧಾನಿ ತಿಳಿಸಿದ್ದಾರೆ.

ನನ್ನ ಪಾಲಿಗೆ ಕೇಳುಗರಾದ ನಿಮ್ಮೆಲ್ಲರ ಈ ಆತ್ಮೀಯತೆ ಮತ್ತು ಪ್ರೀತಿ ಬೆಲೆಕಟ್ಟಲಾಗದ ಅಮೂಲ್ಯ ಸಂಪತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries