HEALTH TIPS

PMLA ಪ್ರಕರಣದಲ್ಲಿ 'ಮಧ್ಯಮ ಮಾರ್ಗ' ಅನುಸರಿಸುವಂತೆ CJI ಚಂದ್ರಚೂಡ್ ಸೂಚಿಸಿದ್ದರು: ನ್ಯಾ. ಎಸ್.ಕೆ. ಕೌಲ್

ನವದೆಹಲಿ:  ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಪ್ರಮುಖ ನಿಬಂಧನೆಗಳನ್ನು ಎತ್ತಿಹಿಡಿದಿದ್ದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆ ಕೋರಿದ್ದ ಅರ್ಜಿಗಳ ವಿಚಾರಣೆಯಲ್ಲಿ 'ಮಧ್ಯಮ ಮಾರ್ಗ' ಅನುಸರಿಸುವಂತೆ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ತನಗೆ ಸೂಚಿಸಿದ್ದರು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್ ಬಹಿರಂಗಪಡಿಸಿದ್ದಾರೆ.


ನ್ಯಾಯಾಂಗ ನೇಮಕಾತಿಗಳಲ್ಲಿನ ವಿಳಂಬಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಾಕಿಯಿರುವ ಕೊಲಿಜಿಯಂ ಶಿಫಾರಸುಗಳ ಕುರಿತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ತಾನು ಪ್ರಯತ್ನಿಸುತ್ತಿದ್ದಾಗ, ಆ ಪ್ರಕರಣವನ್ನೇ ತನ್ನ ಪೀಠದಿಂದ ಹಿಂಪಡೆಯಲಾಗಿತ್ತು ಎಂದೂ ನ್ಯಾ. ಕೌಲ್ ಬಹಿರಂಗಪಡಿಸಿದ್ದಾರೆ. ಈ ಪ್ರಕರಣವನ್ನು ತನ್ನ ಪೀಠದಿಂದ ತೆರವುಗೊಳಿಸಲು ಸಿಜೆಐ ಮೇಲೆ ಒಂದಿಷ್ಟು ಒತ್ತಡವಿದ್ದಂತೆ ಕಂಡುಬಂದಿತ್ತು. ಆದರೆ, ಸರಕಾರವೇ ಆ ಒತ್ತಡ ಹೇರಿತ್ತೇ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ತಮ್ಮ ಮುಂಬರುವ ಆತ್ಮಚರಿತ್ರೆ 'ವಿಥೌಟ್ ಫಿಯರ್ ಆರ್ ಫೇವರ್' ಕುರಿತು 'ದಿ ವೈರ್' ಪತ್ರಕರ್ತ ಕರಣ್ ಥಾಪರ್ ಅವರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ಸಿಜೆಐ ಚಂದ್ರಚೂಡ್ ಅವರೊಂದಿಗಿನ ಮಾತುಕತೆಗಳನ್ನು ನ್ಯಾ. ಕೌಲ್ ನೆನಪಿಸಿಕೊಂಡರು.

ಎಂದಿಗೂ ಮಧ್ಯಮ ಮಾರ್ಗ ಅನುಸರಿಸಿಲ್ಲ

PMLA ಪ್ರಕರಣದ ಕುರಿತು ಮಾತನಾಡಿದ ನ್ಯಾ. ಕೌಲ್, 'ವಿಜಯ ಮದನಲಾಲ್ ಚೌಧರಿ Vs ಭಾರತ ಸರಕಾರ' ಪ್ರಕರಣದ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಗೆ ತಮ್ಮ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಸಜ್ಜಾಗಿದ್ದಾಗ, ಸಿಜೆಐ ಚಂದ್ರಚೂಡ್ ತಮ್ಮನ್ನು ಚೇಂಬರ್‌ ಗೆ ಕರೆಸಿಕೊಂಡಿದ್ದರು ಎಂದು ಹೇಳಿದರು. ಈ ವೇಳೆ ಪೀಠದ ಭಾಗವಾಗಿದ್ದ ನ್ಯಾ. ಸಂಜೀವ್ ಖನ್ನಾ ಕೂಡ ಉಪಸ್ಥಿತರಿದ್ದರು. ಪ್ರಕರಣದ ವಿಚಾರಣೆಯನ್ನು ಮುಂದುವರಿಸದಂತೆ ಸಿಜೆಐ ತಮ್ಮ ಮನವೊಲಿಸಲು ಯತ್ನಿಸಿದ್ದರು. ಒಂದು ವೇಳೆ ವಿಚಾರಣೆ ಮುಂದುವರಿಸಿದರೆ ಎಚ್ಚರಿಕೆ ವಹಿಸುವಂತೆ ಮತ್ತು 'ಮಧ್ಯಮ ಮಾರ್ಗ' ಅನುಸರಿಸುವಂತೆ ಸಲಹೆ ನೀಡಿದ್ದರು ಎಂದು ತಿಳಿಸಿದರು.

ಆದರೆ, ಈ ಹಂತದಲ್ಲಿ ಹಿಂದೆ ಸರಿದರೆ ತಮ್ಮ ಪ್ರಾಮಾಣಿಕತೆಗೆ ಕಳಂಕ ಉಂಟಾಗುತ್ತದೆ ಎಂಬ ಕಾರಣಕ್ಕೆ ವಿಚಾರಣೆ ಮುಂದುವರಿಸಲು ನಿರ್ಧರಿಸಿದ್ದಾಗಿ ನ್ಯಾ. ಕೌಲ್ ತಿಳಿಸಿದರು.

'ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಜನರು ನನ್ನ ಬಗ್ಗೆ ಮಾತನಾಡುವುದಿಲ್ಲವೇ? ನನ್ನ 22 ವರ್ಷಗಳ ನ್ಯಾಯಾಂಗ ಸೇವೆಯಲ್ಲಿ ಇಂತಹ ವಿಷಯಗಳಿಗೆ ಹೆದರಿ ಹಿಂದೆಗೆದರೆ, ನಾನು ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದರ್ಥ. ಯಾರೋ ಒತ್ತಡ ಹೇರಿದರು ಎಂದು ನನ್ನ ಪ್ರಾಮಾಣಿಕತೆಯನ್ನು ಬಲಿ ಕೊಡುವುದಿಲ್ಲ' ಎಂದು ಹೇಳಿದ ನ್ಯಾ. ಕೌಲ್, ತಾನೆಂದಿಗೂ ಮಧ್ಯಮ ಮಾರ್ಗ ಅನುಸರಿಸಿಲ್ಲ ಎಂದು ಸಿಜೆಐಗೆ ಸ್ಪಷ್ಟಪಡಿಸಿದ್ದಾಗಿ ತಿಳಿಸಿದರು.

ತಮ್ಮ ನಿವೃತ್ತಿಯವರೆಗೆ ವಿಚಾರಣೆಯನ್ನು ವಿಳಂಬಗೊಳಿಸಲು ಬಯಸಿದ್ದ ಕೇಂದ್ರ ಸರಕಾರವು ಪದೇ ಪದೇ ಮುಂದೂಡಿಕೆಗಳನ್ನು ಕೋರುತ್ತಲೇ ಇತ್ತು. ಅಂತಿಮವಾಗಿ, ತಮ್ಮ ನಿವೃತ್ತಿಗೆ ಕೆಲವೇ ದಿನಗಳ ಮೊದಲು ಪೀಠವನ್ನು ವಿಸರ್ಜಿಸಲಾಯಿತು ಎಂದು ನ್ಯಾ. ಕೌಲ್ ಹೇಳಿದರು.

ನ್ಯಾಯಾಧೀಶರ ನೇಮಕಾತಿ ಪ್ರಕರಣ ಹಿಂಪಡೆತ

ನ್ಯಾಯಾಂಗ ನೇಮಕಾತಿಯಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಕಾಲಮಿತಿ ನಿಗದಿಪಡಿಸಲು ಯತ್ನಿಸುತ್ತಿದ್ದಾಗ, ಆ ಪ್ರಕರಣವನ್ನು ತಮ್ಮ ಪೀಠದಿಂದ ಹಿಂಪಡೆಯಲಾಗಿತ್ತು. ನ್ಯಾ. ಸುಧಾಂಶು ಧುಲಿಯಾ ಅವರೂ ತಮ್ಮೊಂದಿಗೆ ಪೀಠದಲ್ಲಿದ್ದರು. ವಿಚಾರಣೆಗಳ ವೇಳೆ ಕೊಲಿಜಿಯಂ ನಿರ್ಣಯಗಳನ್ನು ಮೂಲೆಗುಂಪು ಮಾಡಿದ್ದಕ್ಕಾಗಿ ಪೀಠವು ಸರಕಾರವನ್ನು ಟೀಕಿಸಿತ್ತು ಎಂದು ಹೇಳಿದ ನ್ಯಾ. ಕೌಲ್, ಇದ್ದಕ್ಕಿದ್ದಂತೆ ಈ ಪ್ರಕರಣವನ್ನು ಕಾಸ್‌ಲಿಸ್ಟ್‌ನಿಂದ ತೆಗೆದುಹಾಕಲಾಗಿತ್ತು ಎಂದರು.

ರಿಜಿಸ್ಟ್ರಾರ್ ಅವರನ್ನು ವಿಚಾರಿಸಿದಾಗ, ಎರಡು ವರ್ಷಗಳ ಹಿಂದೆ ತನಗೆ ಪ್ರಕರಣ ಹಂಚಿಕೆಯಾದಾಗ ಸಿಜೆಐ ಅವರಿಂದ ಔಪಚಾರಿಕ ಅನುಮತಿ ಪಡೆದಿರಲಿಲ್ಲ ಎಂಬ ತಾಂತ್ರಿಕ ಕಾರಣ ನೀಡಿ ಪ್ರಕರಣವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದ್ದರು. ಪ್ರಕರಣವನ್ನು ಹಿಂಪಡೆದ ರೀತಿಯ ಕುರಿತು ತಮ್ಮ ಅಸಮಾಧಾನವನ್ನು ಸಿಜೆಐಗೆ ತಿಳಿಸಿದ್ದಾಗಿ ನ್ಯಾ. ಕೌಲ್ ಹೇಳಿದರು.

ಸಿಜೆಐ ಒತ್ತಡದಲ್ಲಿದ್ದರೇ ಎಂಬ ಪ್ರಶ್ನೆಗೆ, 'ನಾನು ಈ ಪ್ರಕರಣವನ್ನು ನಿರ್ವಹಿಸಬಾರದು ಎಂದು ಅವರು ಭಾವಿಸಿದ್ದಿರಬಹುದು' ಎಂದು ನ್ಯಾ. ಕೌಲ್ ಉತ್ತರಿಸಿದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries