HEALTH TIPS

PNB ಬ್ಯಾಂಕ್‌ನಲ್ಲಿ 35 ಕೋಟಿ ರೂ.ನಾಪತ್ತೆ ಆರೋಪ: ಐವರು ಸಿಬ್ಬಂದಿ ಅಮಾನತು

ಗ್ರೇಟರ್ ನೋಯ್ಡಾ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ (ಪಿಎನ್‌ಬಿ) ಶಾಖೆಯೊಂದರಲ್ಲಿ ಗ್ರಾಹಕರ ಉಳಿತಾಯ ಖಾತೆ ಮತ್ತು ಸ್ಥಿರ ಠೇವಣಿಗಳಿಂದ (ಎಫ್‌ಡಿ) ಸುಮಾರು 35 ಕೋಟಿ ರೂ. ನಾಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಗ್ರಾಹಕರ ಅನುಮತಿಯಿಲ್ಲದೆ ಹಣ ವರ್ಗಾವಣೆ ಮಾಡಲಾಗಿದೆ ಮತ್ತು ಕೆಲವು ಸ್ಥಿರ ಠೇವಣಿಗಳನ್ನು ಅವಧಿಗೆ ಮುನ್ನವೇ ಮುಚ್ಚಲಾಗಿದೆ ಎಂದು ಆರೋಪಿಸಲಾಗಿದೆ. 


ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಖಾ ವ್ಯವಸ್ಥಾಪಕ ಸೇರಿದಂತೆ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಗ್ರೇಟರ್ ನೋಯ್ಡಾದ ಸೆಕ್ಟರ್ ಪೈ-1ರಲ್ಲಿರುವ ಪಿಎನ್‌ಬಿ ಶಾಖೆಯಲ್ಲಿ ಈ ಅಕ್ರಮದ ಆರೋಪ ಕೇಳಿಬಂದಿದೆ. ತಮ್ಮ ಖಾತೆಯಲ್ಲಿದ್ದ ಹಣ ಏಕಾಏಕಿ ಕಡಿಮೆಯಾಗಿದೆ ಎಂದು ಹಲವು ಗ್ರಾಹಕರು ದೂರಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ, ಖಾತೆದಾರರ ಆರೋಪಗಳನ್ನು ಉಲ್ಲೇಖಿಸಿ ಸುಮಾರು 35 ಕೋಟಿ ರೂ. ನಾಪತ್ತೆಯಾಗಿರುವುದಾಗಿ ವರದಿ ಮಾಡಿದೆ.

ಬುಧವಾರ ಹಲವು ಗ್ರಾಹಕರು ತಮ್ಮ ಹಣದ ಬಗ್ಗೆ ಮಾಹಿತಿ ಪಡೆಯಲು ಬ್ಯಾಂಕ್ ಶಾಖೆಯ ಮುಂದೆ ಜಮಾಯಿಸಿದ್ದರು. ರೈತ ಸಂಘದ ಸದಸ್ಯರೂ ಪ್ರತಿಭಟನೆ ನಡೆಸಿ, ಹಣವನ್ನು ಮರಳಿ ಕೊಡಿಸುವಂತೆ ಮತ್ತು ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪರಿಸ್ಥಿತಿ ನಿಯಂತ್ರಿಸಲು ಬ್ಯಾಂಕ್ ಎದುರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಕುರಿತು ಬ್ಯಾಂಕ್ ಅಧಿಕಾರಿಗಳು ಆಂತರಿಕ ತನಿಖೆ ನಡೆಸುತ್ತಿದ್ದಾರೆ.

ಪಿಟಿಐ ವರದಿ ಪ್ರಕಾರ, ವಿಜಯೇಂದ್ರ ಸಿಂಗ್ ಎಂಬ ಗ್ರಾಹಕರು ತಮ್ಮ ಖಾತೆಯಲ್ಲಿ ಸುಮಾರು 87-88 ಲಕ್ಷ ರೂ. ಇದ್ದ ಹಣ ಕೇವಲ 1 ಲಕ್ಷ ರೂ.ಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.

ಮತ್ತೊಬ್ಬ ಗ್ರಾಹಕ ಹನೀಫ್ ಖಾನ್, ತಮ್ಮ ಉಳಿತಾಯ ಖಾತೆಯಲ್ಲಿದ್ದ 39 ಲಕ್ಷ ರೂ. ನಾಪತ್ತೆಯಾಗಿದೆ ಎಂದು ದೂರಿದ್ದಾರೆ. 'ನನ್ನ ಉಳಿತಾಯ ಖಾತೆಯಲ್ಲಿ 39 ಲಕ್ಷ ರೂ. ಇತ್ತು. ಆದರೆ ಈಗ ಖಾತೆಯಲ್ಲಿ ಹಣ ಕಾಣಿಸುತ್ತಿಲ್ಲ. ಹಣ ವರ್ಗಾವಣೆಗೆ ಅನುಮತಿ ನೀಡುವ ಯಾವುದೇ ಸಂದೇಶ ನನಗೆ ಬಂದಿಲ್ಲ. ಯಾವುದೇ ದಾಖಲೆಗೆ ಸಹಿ ಕೂಡ ಹಾಕಿಲ್ಲ' ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಜಾಕಿರ್ ಎಂಬ ಮತ್ತೊಬ್ಬ ಗ್ರಾಹಕರು ತಮ್ಮ ಖಾತೆಯಿಂದ 9.5 ಲಕ್ಷ ರೂ. ನಾಪತ್ತೆಯಾಗಿದೆ ಎಂದು ಆರೋಪಿಸಿದ್ದಾರೆ. ಹಣ ವರ್ಗಾವಣೆಯ ಕುರಿತು ಮೊಬೈಲ್‌ಗೆ ಯಾವುದೇ ಸಂದೇಶ ಬಂದಿರಲಿಲ್ಲ. ಬ್ಯಾಂಕ್‌ಗೆ ಭೇಟಿ ನೀಡಿದ ಬಳಿಕವಷ್ಟೇ ಅನುಮಾನಾಸ್ಪದ ವಹಿವಾಟಿನ ಬಗ್ಗೆ ತಿಳಿಯಿತು ಎಂದು ಹೇಳಿದ್ದಾರೆ.

ಉಳಿತಾಯ ಖಾತೆಗಳಲ್ಲದೆ, ಸ್ಥಿರ ಠೇವಣಿಗಳಿಗೂ ಸಂಬಂಧಿಸಿದಂತೆ ದೂರುಗಳು ಕೇಳಿಬಂದಿವೆ. ತಮ್ಮ ಅನುಮತಿಯಿಲ್ಲದೆ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ ಮತ್ತು ಕೆಲವು ಎಫ್‌ಡಿಗಳನ್ನು ಅವಧಿ ಮುಗಿಯುವ ಮೊದಲೇ ಮುಚ್ಚಲಾಗಿದೆ ಎಂಬುದು ಗ್ರಾಹಕರ ಆರೋಪವಾಗಿದೆ.

ಪಾಸ್‌ಬುಕ್‌ನಲ್ಲಿ ನಮೂದು ಮಾಡಿಸಲು ಅಥವಾ ವಹಿವಾಟಿನ ವಿವರಗಳನ್ನು ಪಡೆಯಲು ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಆರ್‌ಬಿಐ ಆಡಿಟ್ ನಡೆಯುತ್ತಿದೆ ಎಂದು ತಿಳಿಸಲಾಗಿತ್ತು ಎಂದು ಕೆಲವು ಗ್ರಾಹಕರು ಆರೋಪಿಸಿದ್ದಾರೆ. ಇದರಿಂದ ತಮ್ಮ ಖಾತೆಗಳನ್ನು ಪರಿಶೀಲಿಸಲು ವಿಳಂಬವಾಯಿತು ಎಂದು ಅವರು ದೂರಿದ್ದಾರೆ.

ಬಿರೊಂಡಿ ನಿವಾಸಿ ಶ್ರೀಚಂದ್ ನೀಡಿದ ದೂರಿನ ಆಧಾರದಲ್ಲಿ ಬೀಟಾ-2 ಪೊಲೀಸರು ಪಿಎನ್‌ಬಿ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈವರೆಗೆ 18 ಗ್ರಾಹಕರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ತನಿಖೆಯನ್ನು ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯು) ವರ್ಗಾಯಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಹಣ ವರ್ಗಾವಣೆ ಹೇಗೆ ನಡೆಯಿತು, ಗ್ರಾಹಕರ ಅನುಮತಿಯಿಲ್ಲದೆ ಎಫ್‌ಡಿಗಳನ್ನು ಮುಚ್ಚಲಾಗಿದೆಯೇ ಮತ್ತು ಇದರಲ್ಲಿ ಯಾರ ಪಾತ್ರವಿದೆ ಎಂಬುದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕಿದೆ. ಬ್ಯಾಂಕ್‌ನ ಭ್ರಷ್ಟಾಚಾರ ನಿಗ್ರಹ ತಂಡವೂ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ.

ದೂರುಗಳ ಹಿನ್ನೆಲೆಯಲ್ಲಿ ಶಾಖಾ ವ್ಯವಸ್ಥಾಪಕ ಸೇರಿದಂತೆ ಐವರು ಸಿಬ್ಬಂದಿಯನ್ನು ಪಿಎನ್‌ಬಿ ಆಡಳಿತ ಅಮಾನತುಗೊಳಿಸಿದೆ. ಶಾಖೆಯ ಸಿಬ್ಬಂದಿಯನ್ನೂ ಬದಲಾಯಿಸಲಾಗಿದೆ. ಗ್ರಾಹಕರ ದೂರುಗಳನ್ನು ಸ್ವೀಕರಿಸಿ, ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುವುದಾಗಿ ಬ್ಯಾಂಕ್ ಭರವಸೆ ನೀಡಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries