ನವದೆಹಲಿ: ಭಾರತೀಯ ನೌಕಾಪಡೆಯ ಬಲವರ್ಧನೆಗೆ ಕೇಂದ್ರ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಎಂಟು ಮುಂದಿನ ಪೀಳಿಗೆಯ ಅತ್ಯಾಧುನಿಕ ರಹಸ್ಯ ಯುದ್ಧನೌಕೆಗಳ ನಿರ್ಮಾಣಕ್ಕಾಗಿ 40,000 ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ಯೋಜನೆಗೆ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಭದ್ರತಾ ಸಂಪುಟ ಸಮಿತಿ (CCS) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೋಲ್ಕತ್ತಾದ ಸರಕಾರಿ ಸ್ವಾಮ್ಯದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಆಯಂಡ್ ಇಂಜಿನಿಯರ್ಸ್ (GRSE) ಮತ್ತು ಗೋವಾ ಶಿಪ್ ಯಾರ್ಡ್ ಲಿಮಿಟೆಡ್ (GSL) ಈ ಯುದ್ಧನೌಕೆಗಳನ್ನು ನಿರ್ಮಿಸಲಿವೆ. ಮುಂದಿನ ಕೆಲವು ದಿನಗಳಲ್ಲಿ ಎರಡೂ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.
ಇತ್ತೀಚಿನ ದಿನಗಳಲ್ಲಿ ಅತ್ಯುನ್ನತ ಮಟ್ಟದಲ್ಲಿ ಅನುಮೋದನೆ ಪಡೆದ ಮೊದಲ ಬೃಹತ್ ರಕ್ಷಣಾ ಯೋಜನೆ ಇದಾಗಿದೆ ಎಂದು ರಕ್ಷಣಾ ಮೂಲಗಳು india todayಗೆ ತಿಳಿಸಿವೆ. ಈ ಯೋಜನೆಯಿಂದ ಭಾರತೀಯ ನೌಕಾಪಡೆಯ ಮೇಲ್ಮೈ ಯುದ್ಧ ಸಾಮರ್ಥ್ಯ ವೃದ್ಧಿಯಾಗುವುದರ ಜತೆಗೆ, ದೇಶೀಯ ಯುದ್ಧನೌಕೆ ನಿರ್ಮಾಣ ಕ್ಷೇತ್ರಕ್ಕೂ ದೊಡ್ಡ ಉತ್ತೇಜನ ದೊರೆಯಲಿದೆ.
ಶತ್ರುಗಳ ರೇಡಾರ್ ಗೆ ಸಿಗದಂತೆ ವಿನ್ಯಾಸ
ಮುಂದಿನ ಪೀಳಿಗೆಯ ಎಂಟು ಕಾರ್ವೆಟ್ ಗಳು (NGC) ತಲಾ ಸುಮಾರು 2,000 ಟನ್ ತೂಕ ಹೊಂದಿರಲಿದ್ದು, ಗಂಟೆಗೆ ಸುಮಾರು 56 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರಲಿವೆ. ಚಲಿಸುವ ಸಾಮರ್ಥ್ಯ ಹೊಂದಿರಲಿವೆ. ಸುಧಾರಿತ ಹಡಗು ನಿರ್ಮಾಣ ತಂತ್ರಜ್ಞಾನ ಬಳಸಿ ಭಾರತೀಯ ನೌಕಾಪಡೆಯೇ ಸಂಪೂರ್ಣ ಹೊಸ ರಹಸ್ಯ ವಿನ್ಯಾಸವನ್ನು ಅಭಿವೃದ್ಧಿಪಡಿಸಿದೆ.
ಶತ್ರುಗಳ ರೇಡಾ ರ್‌ಗೆ ಸುಲಭವಾಗಿ ಪತ್ತೆಯಾಗದಂತೆ ರೂಪಿಸಲಾಗಿರುವ ಈ ಯುದ್ಧನೌಕೆಗಳು ಬಹುಪಾತ್ರ ನಿರ್ವಹಣೆಯ ಸಾಮರ್ಥ್ಯ ಹೊಂದಿರಲಿವೆ. ಶತ್ರುಗಳ ಯುದ್ಧನೌಕೆಗಳ ವಿರುದ್ಧ ದಾಳಿ ನಡೆಸುವುದು, ಜಲಾಂತರ್ಗಾಮಿ ನೌಕೆಗಳನ್ನು ಎದುರಿಸುವುದು ಹಾಗೂ ವಾಯುದಾಳಿಗಳನ್ನು ತಡೆಯುವ ಕಾರ್ಯಾಚರಣೆಗಳನ್ನು ನಿರ್ವಹಿಸಲಿವೆ.
ಕರಾವಳಿ ರಕ್ಷಣೆ, ಸಮುದ್ರದಲ್ಲಿ ಗಸ್ತು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೂ ಇವುಗಳನ್ನು ಬಳಸಬಹುದಾಗಿದೆ. ಹಿಂದೂ ಮಹಾಸಾಗರ ಪ್ರದೇಶದಾದ್ಯಂತ (IOR) ವಿವಿಧ ಕಾರ್ಯಾಚರಣೆಗಳ ಅಗತ್ಯಗಳನ್ನು ಪೂರೈಸುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ.
ರಹಸ್ಯ ತಂತ್ರಜ್ಞಾನ, ಸುಧಾರಿತ ಶಸ್ತ್ರಾಸ್ತ್ರಗಳು, ಅತ್ಯಾಧುನಿಕ ಸಂವೇದಕಗಳು ಹಾಗೂ ಹೆಚ್ಚಿನ ಚಲನಶೀಲತೆ ಈ ಯುದ್ಧನೌಕೆಗಳ ಪ್ರಮುಖ ವೈಶಿಷ್ಟ್ಯಗಳಾಗಿವೆ. ಇದರಿಂದ ನೌಕಾಪಡೆಯ ಕಾರ್ಯಾಚರಣೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.
ಶೇ.70ಕ್ಕೂ ಅಧಿಕ ಸ್ಥಳೀಯ ಉತ್ಪಾದನೆಗೆ ಆದ್ಯತೆ
ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಉಪಕ್ರಮಕ್ಕೆ ಅನುಗುಣವಾಗಿ, ಈ ಯೋಜನೆಯಲ್ಲಿ ಶೇ. 70ಕ್ಕೂ ಹೆಚ್ಚು ಸ್ಥಳೀಯ ಬಿಡಿಭಾಗಗಳು ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರಿಂದ ದೇಶೀಯ ರಕ್ಷಣಾ ಉತ್ಪಾದನಾ ವಲಯಕ್ಕೆ ಉತ್ತೇಜನ ದೊರೆಯಲಿದೆ.
ಎಂಟೂ ಯುದ್ಧನೌಕೆಗಳನ್ನು ಭಾರತದಲ್ಲೇ ನಿರ್ಮಿಸುವುದರಿಂದ, ಸರಕಾರದ 'ಸಾಗರ್' (ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಪರಿಕಲ್ಪನೆಗೂ ಮತ್ತಷ್ಟು ಬಲ ದೊರೆಯಲಿದೆ.
40,000 ಕೋಟಿ ರೂ.ಗೂ ಅಧಿಕ ಮೌಲ್ಯದ ಈ ಯೋಜನೆಯನ್ನು ಕೋಲ್ಕತ್ತಾದ GRSE ಮತ್ತು ಗೋವಾದ ಗೋವಾ ಶಿಪ್ ಯಾರ್ಡ್ ಲಿಮಿಟೆಡ್ ನಡುವೆ ಹಂಚಿಕೆ ಮಾಡಲಾಗುತ್ತದೆ. ಇದರಿಂದ ಎರಡೂ ಹಡಗು ನಿರ್ಮಾಣ ಸಂಸ್ಥೆಗಳಿಗೆ ದೀರ್ಘಕಾಲದವರೆಗೆ ನಿರ್ಮಾಣ ಕಾರ್ಯ ದೊರೆಯಲಿದೆ. ಜೊತೆಗೆ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ವಲಯದಲ್ಲಿ ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.



