ಒಟ್ಟು ವಹಿವಾಟು ಮೌಲ್ಯದಲ್ಲಿ ಶೇ. 16ರಷ್ಟು ಭಾರೀ ಏರಿಕೆ
ದೆಹಲಿ: ದೇಶದ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಕ್ಟೋಬರ್ನಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ ಶೇ. 23ರಷ್ಟು ಹೆಚ್ಚಳವಾಗಿದ್ದು, ಬರೋಬ್ಬರಿ 25.47 ಬಿಲಿಯನ್ (2,547 ಕೋಟಿ) ವಹಿವಾಟುಗಳು ನಡೆದಿವೆ.
ಅಲ್ಲದೆ, ಒಟ್ಟು ವಹಿವಾಟಿನ ಮೊತ್ತವು ಶೇ. 16ರಷ್ಟು ವೃದ್ಧಿಸಿ ₹31.53 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಭಾನುವಾರ ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ.
ಅಕ್ಟೋಬರ್ನಲ್ಲಿ ಪ್ರತಿದಿನ ಸರಾಸರಿ 82.2 ಕೋಟಿ ಯುಪಿಐ ವಹಿವಾಟುಗಳು ನಡೆದಿದ್ದು, ದಿನವೊಂದರ ಸರಾಸರಿ ವಹಿವಾಟು ಮೌಲ್ಯ ಸುಮಾರು ₹1,01,707 ಕೋಟಿ ರೂಪಾಯಿಗಳಷ್ಟಿದೆ. ಇದಕ್ಕೂ ಹಿಂದಿನ ಸೆಪ್ಟೆಂಬರ್ ತಿಂಗಳಲ್ಲಿ 24.07 ಬಿಲಿಯನ್ ವಹಿವಾಟುಗಳ ಮೂಲಕ ₹29.37 ಲಕ್ಷ ಕೋಟಿ ಹಣದ ವಿನಿಮಯ ನಡೆದಿತ್ತು.
ಇದಲ್ಲದೆ, ಐಎಂಪಿಎಸ್ (IMPS) ಮೂಲಕ ನಡೆದ ತ್ವರಿತ ಹಣ ವರ್ಗಾವಣೆ ಮೌಲ್ಯವೂ ಅಕ್ಟೋಬರ್ನಲ್ಲಿ ಶೇ. 19ರಷ್ಟು ಹೆಚ್ಚಳ ಕಂಡು ₹7.63 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರತಿದಿನ ಸರಾಸರಿ 1.21 ಕೋಟಿ ಐಎಂಪಿಎಸ್ ವಹಿವಾಟುಗಳ ಮೂಲಕ ₹24,601 ಕೋಟಿ ಹಣ ವರ್ಗಾವಣೆಯಾಗಿದೆ.
ಇದೇ ವೇಳೆ, ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಆಯ್ದ ಯುಪಿಐ ವ್ಯಾಪಾರ ವಹಿವಾಟುಗಳ (ಮರ್ಚೆಂಟ್ ಟ್ರಾನ್ಸಾಕ್ಷನ್) ಮೇಲೆ ಮರ್ಚೆಂಟ್ ಡಿಸ್ಕೌಂಟ್ ದರ (MDR) ವಿಧಿಸುವ ನಿರ್ಧಾರವನ್ನು ದೀಪಾವಳಿ ಮುಗಿಯುವವರೆಗೆ ಎನ್ಪಿಸಿಐ ಮುಂದೂಡಿದೆ. ಅಕ್ಟೋಬರ್ 15 ರಿಂದಲೇ ಜಾರಿಗೆ ಬರಬೇಕಿದ್ದ ಈ ಶುಲ್ಕಗಳ ಅನ್ವಯದ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.



