ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದ ಸುಮಾರು ಶೇ. 40ರಷ್ಟಿರುವ ಇಂಧನ ದರ ಏರಿಕೆಯಿಂದ ವಾಯುಯಾನ ಕ್ಷೇತ್ರಕ್ಕೆ ಹೊಡೆತ
ದೆಹಲಿ: ಸಾರ್ವಜನಿಕ ವಲಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳು ಹಾಗೂ ವಿಮಾನ ಇಂಧನದ (ಎಟಿಎಫ್) ದರವನ್ನು ಮತ್ತೊಮ್ಮೆ ಹೆಚ್ಚಿಸಿವೆ.
19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರವನ್ನು ₹10 ಹೆಚ್ಚಿಸಲಾಗಿದ್ದು, ಹೊಸ ಬೆಲೆ ₹2,820ಕ್ಕೆ ತಲುಪಿದೆ. ಅಕ್ಟೋಬರ್ 1 ರಂದು ಸಿಲಿಂಡರ್‌ಗೆ ₹62.50 ಹಾಗೂ ಸೆಪ್ಟೆಂಬರ್ 1 ರಂದು ₹9.50 ಏರಿಕೆ ಮಾಡಲಾದ ಬೆನ್ನಲ್ಲೇ, ಸತತ ಮೂರನೇ ತಿಂಗಳೂ ವಾಣಿಜ್ಯ ಎಲ್‌ಪಿಜಿ ದರ ಏರಿಕೆಯಾದಂತಾಗಿದೆ.
ಅದೇ ವೇಳೆ, 14.2 ಕೆಜಿ ತೂಕದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ₹942 ರಲ್ಲೇ ಯಥಾಸ್ಥಿತಿ ಮುಂದುವರಿದಿದೆ.
ವಿಮಾನ ಇಂಧನ ದರವು ಪ್ರತಿ ಲೀಟರ್‌ಗೆ ₹1.37 ಹೆಚ್ಚಳವಾಗಿದ್ದು, ₹138.50 ಕ್ಕೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಯ ಏರಿಳಿತ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ವ್ಯತ್ಯಾಸವೇ ಈ ದರ ಹೆಚ್ಚಳಕ್ಕೆ ಕಾರಣ ಎಂದು ತೈಲ ಕಂಪನಿಗಳು ಸಮರ್ಥಿಸಿಕೊಂಡಿವೆ.
ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ಸುಮಾರು ಶೇ. 40ರಷ್ಟು ಪಾಲು ಇಂಧನದ್ದೇ ಆಗಿರುವುದರಿಂದ, ಈ ದರ ಏರಿಕೆಯು ವಾಯುಯಾನ ಕ್ಷೇತ್ರಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಇನ್ನು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆಗಸ್ಟ್ ಮತ್ತು ಜುಲೈ ತಿಂಗಳುಗಳಲ್ಲಿ ಇಳಿಕೆ ಕಂಡಿದ್ದ ವಾಣಿಜ್ಯ ಇಂಧನ ದರಗಳು ಇದೀಗ ಮತ್ತೆ ಗಗನಮುಖಿಯಾಗಿವೆ.



