ಕಾಸರಗೋಡು: ಚೆಮ್ನಾಡ್ ಮಹಿಳಾ ಸೇವಾ ಸಹಕಾರಿ ಸಂಘದಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹4.40 ಲಕ್ಷ ಪಡೆದು ವಂಚಿಸಿದ್ದ ಕುಖ್ಯಾತ ಆರೋಪಿಯನ್ನು ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಂದ್ರಗಿರಿ ಕೀಯೂರು ನಿವಾಸಿ ಕೆ. ಸಾಜುದ್ದೀನ್ (47) ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು ವಂಚನೆ
ಆರೋಪಿ ಸಾಜುದ್ದೀನ್ ಕಳೆದ ಮೂರು ತಿಂಗಳ ಅವಧಿಯಲ್ಲಿ ಒಂದು ಚಿನ್ನದ ಸರ ಹಾಗೂ ನಾಲ್ಕು ಬಳೆಗಳು ಸೇರಿದಂತೆ ಒಟ್ಟು 48.21 ಗ್ರಾಂ ತೂಕದ ಆಭರಣಗಳನ್ನು ಸಹಕಾರಿ ಸಂಘದಲ್ಲಿ ಅಡವಿಟ್ಟು ಹಂತ-ಹಂತವಾಗಿ ₹4.40 ಲಕ್ಷ ಸಾಲ ಪಡೆದುಕೊಂಡಿದ್ದನು.
ಬಳಿಕ ಸಂಘದ ಅಧಿಕಾರಿಗಳು ಆಭರಣಗಳನ್ನು ಮರುಪರಿಶೀಲನೆಗೆ ಒಳಪಡಿಸಿದಾಗ, ಅಡವಿರಿಸಲಾದ ಎಲ್ಲಾ ಒಡವೆಗಳು ನಕಲಿ ಚಿನ್ನದಿಂದ ಮಾಡಲ್ಪಟ್ಟಿವೆ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಘದ ಕಾರ್ಯದರ್ಶಿ ಉಷಾಕುಮಾರಿ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಕೇರಳ-ಕರ್ನಾಟಕದಲ್ಲಿ ಹಲವು ಪ್ರಕರಣಗಳು ದಾಖಲು
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡು ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಡಗಿಕೊಂಡಿದ್ದನು. ಪೊಲೀಸರು ಆತನ ಚಲನವಲನದ ಮೇಲೆ ನಿಗಾ ಇರಿಸಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಸಾಜುದ್ದೀನ್ ವಿರುದ್ಧ ಈಗಾಗಲೇ ಕರ್ನಾಟಕದ ಸುಳ್ಯ, ಪುತ್ತೂರು ಹಾಗೂ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳವು ಮತ್ತು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

.jpg)
