ಕುಂಬಳೆ: ಬಂಟರ ಸಂಘ ಕುಂಬಳೆ ಪಂಚಾಯತ್ ಸಮಿತಿ ವತಿಯಿಂದ ‘ಬಂಟರ ಪರ್ಬ’ ಕಾರ್ಯಕ್ರಮವು ನವೆಂಬರ್ 1 ರಂದು ಬೆಳಗ್ಗೆ 10:00 ಗಂಟೆಯಿಂದ ಕುಂಬಳೆ ಸಮೀಪದ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಕಾರ್ಯಕ್ರಮವನ್ನು ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಉದ್ಘಾಟಿಸಲಿದ್ದಾರೆ. ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಂಬ್ರಾಣ ಯಜಮಾನ್ ಮೋಹನದಾಸ ರೈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಂಬಳೆ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹೈಕೋರ್ಟ್ ವಕೀಲೆ ಭಾಗ್ಯಶ್ರೀ ರೈ, ಮಾತೃಸಂಘ ಕಾಸರಗೋಡು ತಾಲೂಕು ಸಮಿತಿ ಸಂಚಾಲಕ ಮುಕ್ತಾನಂದ ರೈ, ಕಾಸರಗೋಡು ಬಂಟರ ಸಂಘದ ಜತೆ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರ್, ಮಾತೃಸಂಘ ಮಂಗಳೂರು ಕಾರ್ಯಕಾರಿ ಸಮಿತಿ ಸದಸ್ಯೆ ಪುಷ್ಪಲತಾ ಪಿ. ಶೆಟ್ಟಿ ಹಾಗೂ ಕುಂಬಳೆ ಮಹಿಳಾ ಘಟಕದ ಕಾರ್ಯದರ್ಶಿ ಪ್ರೇಮಾ ಶೆಟ್ಟಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸಡಗರ
ಕಾರ್ಯಕ್ರಮದ ಅಂಗವಾಗಿ ಕುಂಬಳೆ ಪಂಚಾಯತ್ ವ್ಯಾಪ್ತಿಯ ಪುರುಷರಿಗಾಗಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸೇರಿದಂತೆ ವಿವಿಧ ವಿನೋದ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.
ಸಂಜೆ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂಬಳೆ ಬಂಟರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ವಹಿಸಲಿದ್ದು, ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಕೀಲ ಐ. ಸುಬ್ಬಯ್ಯ ರೈ, ಉದ್ಯಮಿಗಳಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರ್, ವಿವೇಕ್ ಶೆಟ್ಟಿ ಕಿದೂರುಗುತ್ತು, ಮೋಹನ್ ರೈ ಕುಂಡಾಪು ಹಾಗೂ ಹಡ್ಕೋ (HUDCO) ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಆಳ್ವ ಕಿದೂರುಗುತ್ತು ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು.
ರಾತ್ರಿ 6:00 ಗಂಟೆಯಿಂದ 'ನಮ್ಮ ಕಲಾವಿದೆರ್ ಬೆದ್ರ' ತಂಡದ ಉಮೇಶ್ ಮಿಜಾರ್ ಬಳಗದವರಿಂದ 'ತೆಲಿಕೆದ ಗೊಂಚಿಲ್' ತುಳು ಹಾಸ್ಯ ರಸಮಂಜರಿ ಕಾರ್ಯಕ್ರಮ ರಂಗೇರಲಿದೆ.

