ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸದೇ ಇದ್ದಿದ್ದರೆ ಮಾನವೀಯತೆಯೇ ಉತ್ತಮ ಸ್ಥಿತಿಯಲ್ಲಿರುತ್ತಿತ್ತು ಎಂದು 'AI ಪಿತಾಮಹ' ಎಂದೇ ಗುರುತಿಸಿಕೊಂಡಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಕಂಪ್ಯೂಟರ್ ವಿಜ್ಞಾನಿ ಪ್ರೊಫೆಸರ್ ಜೆಫ್ರಿ ಹಿಂಟನ್ ಅಭಿಪ್ರಾಯಪಟ್ಟಿದ್ದಾರೆ.
AI ತಂತ್ರಜ್ಞಾನ ದಿನದಿಂದ ದಿನಕ್ಕೆ ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಸಂಭಾವ್ಯ ಅಪಾಯಗಳ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನವೆಂಬರ್ 3ರಂದು ದಿ ಗಾರ್ಡಿಯನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಿಂಟನ್, AI ಸಕಾರಾತ್ಮಕ ಭವಿಷ್ಯಕ್ಕೆ ದಾರಿಯಾಗಬಹುದಾದರೂ, ಅದರ ಅಪಾಯಗಳನ್ನು ಸಮರ್ಪಕವಾಗಿ ನಿಯಂತ್ರಿಸದಿದ್ದರೆ ಗಂಭೀರ ಪರಿಣಾಮಗಳು ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.
"ನಾವು AI ತಂತ್ರಜ್ಞಾನವನ್ನು ಎಂದಿಗೂ ಅಭಿವೃದ್ಧಿಪಡಿಸದೇ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು" ಎಂದು ಅವರು ಹೇಳಿದ್ದಾರೆ.
ಈ ವರ್ಷ ಅಥವಾ ಮುಂದಿನ ವರ್ಷ AI ತಂತ್ರಜ್ಞಾನದಿಂದ ವಿದ್ಯುತ್ ಅಥವಾ ಹಣಕಾಸು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟುಮಾಡುವಂತಹ ದೊಡ್ಡ ಘಟನೆ ಸಂಭವಿಸುವ ಸಾಧ್ಯತೆಯಿದೆ ಎಂದು ಹಿಂಟನ್ ಎಚ್ಚರಿಸಿದ್ದಾರೆ. ಇಂತಹ ಘಟನೆಯನ್ನು ಚೆರ್ನೋಬಿಲ್ ದುರಂತದ ಪ್ರಮಾಣಕ್ಕೆ ಹೋಲಿಸಿರುವ ಅವರು, ಗಂಭೀರ ಅವಘಡ ಸಂಭವಿಸಿದರೆ ಮಾತ್ರ ಸರ್ಕಾರಗಳು ಮತ್ತು ತಂತ್ರಜ್ಞಾನ ಕಂಪೆನಿಗಳು AI ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬಹುದು ಎಂದು ಹೇಳಿದ್ದಾರೆ.
ಹೆಚ್ಚು ಸಾಮರ್ಥ್ಯವುಳ್ಳ AI ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಯಲ್ಲಿ ಪ್ರಮುಖ ತಂತ್ರಜ್ಞಾನ ಕಂಪೆನಿಗಳು ತೊಡಗಿರುವುದರ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಸುರಕ್ಷತೆಗಿಂತ ವಾಣಿಜ್ಯ ಹಿತಾಸಕ್ತಿಗಳಿಗೆ ಆದ್ಯತೆ ಸಿಗುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
AI ತಂತ್ರಜ್ಞಾನಕ್ಕೆ ಬಲವಾದ ನಿಯಂತ್ರಣ ವ್ಯವಸ್ಥೆ ರೂಪಿಸುವಂತೆ ಅವರು ಒತ್ತಾಯಿಸಿದ್ದಾರೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ ಮಾದರಿಯಲ್ಲಿ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಅವರ ಸಲಹೆ. ಕಂಪೆನಿಗಳು ತಮ್ಮ AI ಮಾದರಿಗಳನ್ನು ಬಿಡುಗಡೆ ಮಾಡುವ ಮೊದಲು ಅವುಗಳಿಂದ ಹಾನಿಗಿಂತ ಹೆಚ್ಚು ಪ್ರಯೋಜನವಾಗಲಿದೆ ಎಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ.
ಆದರೆ, AIನಿಂದ ಉಂಟಾಗಬಹುದಾದ ಅಪಾಯಗಳನ್ನು ನಿಯಂತ್ರಿಸುವ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದರೆ ಮಾನವೀಯತೆಯು ಈ ಅಪಾಯಗಳನ್ನು ನಿರ್ವಹಿಸಲು ಸಾಧ್ಯವಿದೆ ಎಂಬ ಆಶಾವಾದವನ್ನೂ ವ್ಯಕ್ತಪಡಿಸಿದ್ದಾರೆ.
►ಮಾನವರಿಗೆ ಮೇಲುಗೈ ತಂದುಕೊಡಬಹುದಾದ ಮೂರು ಕೌಶಲಗಳು
AI ವ್ಯವಸ್ಥೆಗಳು ಹೆಚ್ಚು ಸಮರ್ಥವಾಗುತ್ತಿರುವ ಸಂದರ್ಭದಲ್ಲಿ, ಮಾನವರು ತಮ್ಮ ಮೇಲುಗೈ ಉಳಿಸಿಕೊಳ್ಳಬಹುದಾದ ಮೂರು ಕ್ಷೇತ್ರಗಳನ್ನು ಹಿಂಟನ್ ಗುರುತಿಸಿದ್ದಾರೆ. ನವೆಂಬರ್ 4ರಂದು ಪ್ರಕಟವಾದ ವರದಿಯಲ್ಲಿ ಎನ್ಡಿಟಿವಿ ಈ ವಿವರಗಳನ್ನು ಉಲ್ಲೇಖಿಸಿದೆ.
ಉನ್ನತ ಮಟ್ಟದ ಸೃಜನಶೀಲತೆ:
ಕಥೆಗಳು, ಚಿತ್ರಗಳು ಮತ್ತು ಸಂಗೀತವನ್ನು ಸೃಷ್ಟಿಸುವ ಸಾಮರ್ಥ್ಯ AIಗೆ ಇದೆ. ಆದರೆ, ಅತ್ಯುತ್ತಮ ಮಾನವ ಸೃಜನಶೀಲ ಕಲಾವಿದರ ಸಾಮರ್ಥ್ಯವನ್ನು ಇನ್ನೂ ತಲುಪಿಲ್ಲ ಎಂಬುದು ಹಿಂಟನ್ ಅವರ ಅಭಿಪ್ರಾಯ. ಹೀಗಾಗಿ, ಮೂಲ ಚಿಂತನೆ ಮತ್ತು ಅಸಾಧಾರಣ ಕಲಾತ್ಮಕ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮಾನವರಿಗೆ ಮೌಲ್ಯಯುತವಾಗಿ ಉಳಿಯಬಹುದು ಎಂದು ಅವರು ನಂಬಿದ್ದಾರೆ.
ಹಸ್ತಚಾಲಿತ ಕೌಶಲ:
ಪರಿಚಯವಿಲ್ಲದ ವಸ್ತುಗಳನ್ನು ನಿರ್ವಹಿಸುವುದು, ಸೂಕ್ಷ್ಮ ಕೆಲಸಗಳನ್ನು ಮಾಡುವುದು ಹಾಗೂ ಅನಿರೀಕ್ಷಿತ ಭೌತಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ರೋಬೊಟ್ ಗಳು ಇನ್ನೂ ಸವಾಲು ಎದುರಿಸುತ್ತಿವೆ. ಇಂತಹ ಸೂಕ್ಷ್ಮ ಚಲನಾ ಕೌಶಲಗಳಲ್ಲಿ ಮಾನವರು AIಗಿಂತ ಮೇಲುಗೈ ಹೊಂದಿದ್ದಾರೆ ಎಂದು ಹಿಂಟನ್ ಹೇಳಿದ್ದಾರೆ.
ಸಹಾನುಭೂತಿ:
ಸಹಾನುಭೂತಿ ಇರುವಂತೆ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ AIಗಿದ್ದರೂ, ಸಹಾನುಭೂತಿಯನ್ನು ಅನುಕರಿಸುವುದು ಮತ್ತು ಅದನ್ನು ನೈಜವಾಗಿ ಅನುಭವಿಸುವುದು ಎರಡೂ ಬೇರೆ ಎಂದು ಹಿಂಟನ್ ಅಭಿಪ್ರಾಯಪಟ್ಟಿದ್ದಾರೆ.
AI ಸೃಷ್ಟಿಸುವ ಪ್ರತಿಕ್ರಿಯೆಗಳು ಕೆಲವೊಮ್ಮೆ ಮಾನವ ವೈದ್ಯರ ಪ್ರತಿಕ್ರಿಯೆಗಳಿಗಿಂತ ಹೆಚ್ಚಿನ ಸಹಾನುಭೂತಿಯ ಮೌಲ್ಯಮಾಪನ ಪಡೆಯಬಹುದು ಎಂಬ ಅಂಶವನ್ನೂ ಎನ್ಡಿಟಿವಿ ವರದಿ ಉಲ್ಲೇಖಿಸಿದೆ. ಇದು ಹೊರನೋಟಕ್ಕೆ ವ್ಯಕ್ತವಾಗುವ ಸಹಾನುಭೂತಿ ಮತ್ತು ನೈಜ ಭಾವನಾತ್ಮಕ ಅರಿವಿನ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ.



